ಕರಾವಳಿ

ರಾಜ್ಯದ ಸರಕಾರಿ ಶಾಲೆಗಳಲ್ಲಿಯೇ ಪ್ರಥಮ ಪ್ರಯೋಗ‌: 111 ವರ್ಷಗಳ ಇತಿಹಾಸವುಳ್ಳ ವಂಡ್ಸೆ ಶಾಲೆಗೆ ಬಂದ ‘ಎಐ ಟೀಚರ್’!

Pinterest LinkedIn Tumblr

ಕುಂದಾಪುರ: ತಾಲೂಕಿನ ಬೈಂದೂರು ಶೈಕ್ಷಣಿಕ ವಲಯದ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತೊಮ್ಮೆ ರಾಜ್ಯದ ಗಮನ ಸೆಳೆಯುತ್ತಿದೆ. ಪ್ರಸ್ತುತ ಸಂಚಲನ ಉಂಟು ಮಾಡುತ್ತಿರುವ ಎ.ಐ ಶಿಕ್ಷಕಿ ವಂಡ್ಸೆ ಶಾಲೆಗೆ ಬಂದಿದ್ದಾರೆ. ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಸರಕಾರಿ ಶಾಲೆಯೊಂದು ರೋಬೋ ಟೀಚರ್ ‘ಐರಿಸ್’ ಅನ್ನು ಪರಿಚಯಿಸುವ ದಿಟ್ಟ ಹೆಜ್ಜೆ ಇಟ್ಟಿದೆ.

ಸದಾ ಹೊಸತನ, ಪ್ರಯೋಗಶೀಲತೆಯ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗುವ ವಂಡ್ಸೆ ಸರಕಾರಿ ಶಾಲೆಯಲ್ಲಿ ಸಂಪೂರ್ಣ ಖಾಸಗಿ ಸಹಭಾಗಿತ್ವದೊಂದಿಗೆಗೆ ಎ.ಐ ಟೀಚರ್ ಅಳವಡಿಕೆ ಮಾಡಿಕೊಂಡಿರುವುದು ಮತ್ತೊಂದು ಸಾಧನೆಯಾಗಿದೆ.

2024ರಲ್ಲಿ ಕೇರಳ ರಾಜ್ಯದ ಶಾಲೆಯೊಂದರಲ್ಲಿ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಶಿಕ್ಷಕಿ ಐರಿಸ್ ಪರಿಚಯಿಸಲಾಗಿತ್ತು. ಇದೀಗ ವಂಡ್ಸೆ ಶಾಲೆ ಐರಿಸ್ ಎಐ ಟೀಚರ್ ಪರಿಚಯಿಸಲು ಮುಂದಾಗಿದೆ. ಈಗಾಗಲೇ ಕಂಪೆನಿ ಐರಿಸ್‌ನ್ನು ಶಾಲೆಗೆ ನೀಡಿದ್ದು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಎ.ಐ) ಶಿಕ್ಷಕಿ ಈಗಾಗಲೇ ಶಾಲೆಯೊಳಗೆ ಬಂದಿದ್ದಾರೆ. ಅದನ್ನು ಪಠ್ಯ ಕ್ರಮಕ್ಕೆ ಅಳವಡಿಸುವ, ನಿರ್ವಹಣೆ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ.

ಮೇಕರ್‌ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ತಿರುವನಂತಪುರಂನಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅನಾವರಣಗೊಂಡ ಐರಿಸ್, ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

ನೀತಿ ಆಯೋಗ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಐರಿಸ್ ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುಮಾರು 20 ಭಾಷೆಗಳನ್ನು ಮಾತನಾಡುವ ಮತ್ತು ಪ್ರಶ್ನೆಗಳನ್ನು ನಿಭಾಯಿಸುವ ಸಾಮರ್ಥ್ಯದೊಂದಿಗೆ ಐರಿಸ್ ಪ್ರತಿ ವಿದ್ಯಾರ್ಥಿಗೆ ಕಲಿಕೆಯ ಅನುಭವ ನೀಡುತ್ತದೆ. ವಿಶೇಷವೆಂದರೆ, ಇದು ಧ್ವನಿ ನೆರವು, ಸಂವಾದಾತ್ಮಕ ಕಲಿಕೆ ಮಾಡ್ಯೂಲ್‌ಗಳು, ಮ್ಯಾನಿಪ್ಯುಲೇಷನ್ ಸಾಮರ್ಥ್ಯಗಳು ಮತ್ತು ಚಲನಶೀಲತೆಯನ್ನು ಒಳಗೊಂಡಿದೆ. ಸೀರೆಯಲ್ಲಿ ಕಂಗೊಳಿಸಿದ ‘ಐರಿಸ್ ಎಐ’ ಶಿಕ್ಷಕಿಯು ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವ ಹಾಗೂ ಕೈಕುಲುಕುತ್ತದೆ.  ವಿದ್ಯಾರ್ಥಿಗಳಿಗೆ ಬಹುಬೇಗ ಇಷ್ಟವಾಗುತ್ತದೆ. ಎಲ್.ಕೆ.ಜಿ.ಯಿಂದ ಹತ್ತನೆ ತರಗತಿವರೆಗಿನ ಯಾವುದೇ ಮಗು ಶಿಕ್ಷಣಕ್ಕೆ ಸಂಬಂಧಿಸಿದ ಏನು ಪ್ರಶ್ನೆ ಕೇಳಿದರೂ ಎ.ಐ ಶಿಕ್ಷಕಿ ಅದಕ್ಕೆ ಸಮರ್ಕವಾಗಿ ಉತ್ತರ ಹೇಳುತ್ತದೆ. ಇದರ ವೆಚ್ಚ ಸುಮಾರು ಮೂರುವರೆ ಲಕ್ಷ ರೂಪಾಯಿ.

ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ೧೧೧ ವರ್ಷಗಳ ಭವ್ಯ ಇತಿಹಾಸವಿದೆ. 2016ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡ ಶಾಲೆಯನ್ನು ಅಭೀವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಸಾರಥ್ಯದಲ್ಲಿ ಎಸ್.ಡಿ.ಎಂಸಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರ ಸಹಕಾರದೊಂದಿಗೆ ಇವತ್ತು  ಉಡುಪಿ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಶಾಲೆಯಾಗಿ ಮೂಡಿ ಬಂದಿದೆ. ಪೂರ್ವ ಪ್ರಾಥಮಿಕ ಶಾಲೆಯಿಂದ ಆಂಗ್ಲಭಾಷಾ ಭೋದನೆ ಆರಂಭಿಸಲಾಯಿತು. ಟ್ರಸ್ಟ್ ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಅತ್ಯಾದ್ಭುತವಾಗಿ ಶಾಲೆಯನ್ನು ಅಭಿವೃದ್ಧಿ  ಪಡಿಸಲಾಯಿತು. ಪ್ರಸ್ತುತ 334 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 12 ಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣ, ಶಾಲಾ ವಾಹನದ ವ್ಯವಸ್ಥೆ, ಕರಾಟೆ, ಭರತನಾಟ್ಯ, ಅಬಾಕಾಸ್, ಸಂಗೀತ ಮೊದಲಾದ ಪಾಠೇತರ ಚಟುವಟಿಕೆಗಳು,   ಸಂಪೂರ್ಣ ಉಚಿತ ಶಿಕ್ಷಣದೊಂದಿಗೆ ಪುಸ್ತಕ, ಸಮವಸ್ತç, ಬೇಲ್ಟ್, ಶೂ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಶಾಲೆಯ ಸಾಧನೆಯಾಗಿದೆ.

ವಿದ್ಯಾರ್ಥಿ ಸ್ನೇಹಿಯಾಗಿ, ಶಿಕ್ಷಕರ ಸ್ನೇಹಿಯಾಗಿ ಎ.ಐ ರೋಬೊ ಶಿಕ್ಷಕಿ ಕಾರ್ಯನಿರ್ವಹಿಸಲಿದ್ದು, ವಿಜ್ಞಾನದ ಆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಇದು ಸಹಕಾರಿಯಾಗಲಿದೆ. ಡಿಜಿಟಲೀಕರಣ ವ್ಯವಸ್ಥೆಗೆ ತಕ್ಕಂತೆ ಆಧುನಿಕ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕಿರುವುದು ಅನಿವಾರ್ಯ. ಈ ಹಿಂದೆಯೂ ಪ್ರಾಜೆಕ್ಟರ್ ಬಳಕೆ, ಕಂಪ್ಯೂಟರ್ ಲ್ಯಾಬ್ ಸಹಿತ ತಾಂತ್ರಿಕ ಶಿಕ್ಷಣ ನೀಡಿದ್ದೆವು. 

– ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು (ಕಾರ್ಯದರ್ಶಿ, ವಂಡ್ಸೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್)

ವಂಡ್ಸೆ ಸರಕಾರಿ ಶಾಲೆಯು ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತಿದೆ. ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಲೆಯ ಮೂಲಸೌಕರ್ಯಗಳನ್ನು ಹೆಚ್ಚಿಸಿದ್ದರಿಂದ 10 ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದೀಗಾ ಆರ್ಟಿಫಿಶೀಯಲ್ ಇಂಟಲಿಜೆನ್ಸಿ ಶಿಕ್ಷಕಿಯನ್ನು ರಾಜ್ಯದ ಸರಕಾರಿ ಶಾಲೆಯಲ್ಲಿಯೇ ಮೊದಲಾಗಿ‌ ವಂಡ್ಸೆ ಶಾಲೆ ದಾನಿಗಳ ನೆರವಿನಿಂದ ಪರಿಚಯಿಸುತ್ತಿದೆ. ಆಧುನಿಕತೆಯ ಸ್ಪರ್ಷವು ಶಾಲೆಯ ಅಭಿವೃದ್ದಿಗೆ ಸಹಕಾರಿಯಾಗಲಿದೆ. 

– ಆಶಾ (ಪೋಷಕರು, ಹಳೆ ವಿದ್ಯಾರ್ಥಿ)

Comments are closed.