ಕುಂದಾಪುರ: ತಾಲೂಕಿನ ಕೋಡಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿದ್ದ ’ಪ್ರಾಸ್ಪೆರಾ – ದಿ ಬಿಸಿನೆಸ್ ಫೆಸ್ಟ್’ ಯಶಸ್ವಿಯಾಗಿ ಜರುಗಿತು. “ಹೊಸ ಆಲೋಚನೆಗಳು ಅವಕಾಶಗಳಾಗಿ ಬದಲಾಗಲಿ” ಎಂಬ ಆಶಯದೊಂದಿಗೆ ನಡೆದ ವಾಣಿಜ್ಯ ಉತ್ಸವವು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಉದ್ಯಮಶೀಲತೆಗೆ ಸಾಕ್ಷಿಯಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸ್ಥಾಪಕಾಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿಯವರು ಮಾತನಾಡಿ, ಆತ್ಮವಿಶ್ವಾಸ ಇರುವ ವ್ಯಕ್ತಿಯು ತನ್ನ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಎದುರಿಸುತ್ತಾನೆ, ಹೋರಾಡುತ್ತಾನೆ ಮತ್ತು ಅಂತಿಮವಾಗಿ ಗೆಲುವನ್ನು ಸಾಧಿಸುತ್ತಾನೆ. ಯಶಸ್ಸಿನ ಹಾದಿಯಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಜೀವನದ ಪ್ರತಿಯೊಂದು ಹಂತದಲ್ಲೂ, ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ ಎಂದರು.
ಬ್ಯಾರೀಸ್ ಸಮೂಹ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸೀಫ್ ಬ್ಯಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಮತ್ತು ವೇಗದ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪದವಿ ವ್ಯಾಸಂಗದ ಅವಧಿಯಲ್ಲೇ ಪ್ರಾಯೋಗಿಕ ಅನುಭವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ, ಇದು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಂಡದ ಕೆಲಸ ಮತ್ತು ಸಂವಹನ ಕೌಶಲಗಳನ್ನು ವೃದ್ಧಿಸಲು ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿಯವರು ಮಾತನಾಡಿ, ಸಂಸ್ಥೆಯು ಸದಾ ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿದೆ. ಪ್ರಾಸ್ಪೆರಾ ಬ್ಯುಸಿನೆಸ್ ಫೆಸ್ಟ್‌ಗಳು ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳನ್ನು ಮೂಡಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇಲ್ಲಿ ಕೇವಲ ಶೈಕ್ಷಣಿಕ ಜ್ಞಾನವನ್ನಷ್ಟೇ ಪಡೆಯದೆ, ಗ್ರಾಹಕರನ್ನು ಒಪ್ಪಿಸುವ ಮತ್ತು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವ ಪ್ರಾಯೋಗಿಕ ಕೌಶಲಗಳನ್ನು ಕಲಿಯಬೇಕು ಎಂದರು.
ಬ್ಯಾರೀಸ್ ಸಮೂಹ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ಯಶಸ್ವಿ ಉದ್ಯಮಿಯಾಗಲು ದೊಡ್ಡಕನಸುಗಳನ್ನು ಕಾಣುವುದು ಎಷ್ಟು ಮುಖ್ಯವೋ, ಅಷ್ಟೇಮುಖ್ಯವಾಗಿ ಆತ್ಮವಿಶ್ವಾಸದಿಂದ ಸರಿಯಾದ ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸಮಯೋಚಿತ ನಿರ್ಧಾರಗಳು ಮತ್ತು ಸೃಜನಶೀಲ ಆಲೋಚನೆಗಳು ಒಬ್ಬ ವ್ಯಕ್ತಿಯನ್ನು ಭವಿಷ್ಯದ ನಾಯಕನನ್ನಾಗಿ ರೂಪಿಸುತ್ತವೆ’ ಎಂದರು.
ಕೋಡಿ ಶ್ರೀ ಚಕ್ರಮ್ಮ ದೇವಸ್ಥಾನದ ಧರ್ಮದರ್ಶಿಗಳಾದ ಗೋಪಾಲ್ ಪೂಜಾರಿಯವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಇಂತಹ ಇನ್ನೂ ಹೆಚ್ಚಿನ ಅವಕಾಶಗಳನ್ನು ಅವರಿಗೆ ಒದಗಿಸಿಕೊಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಲಹಾ ಮಂಡಳಿ ಸದಸ್ಯರು ಮತ್ತು ರಕ್ಷಕ ಶಿಕ್ಷಕ ಸಂಘದ ಸದಸ್ಯರು,ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಬೀನಾ ಹೆಚ್, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲರಾದ ಆಫ್ರಿನ್ ಖಾನ್, ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಪ್ರೊ. ಪ್ರವೀಣ್ ಕುಮಾರ್ ಕೆ. ಪಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವಿನುತ ಯು ಎನ್, ಗಣಕ ವಿಭಾಗದ ಮುಖ್ಯಸ್ಥೆಯಾದ ನೂತನ್ ಎಸ್, ಕಾರ್ಯಕ್ರಮದ ಸಂಯೋಜಕರಾದ ನಾಗರಾಜ್ ದೇವ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಅಶ್ವಿನಿ ನಿರೂಪಿಸಿದರು. ಗಣಕ ವಿಭಾಗದ ಉಪನ್ಯಾಸಕಿ ಐಶ್ವರ್ಯ ಸ್ವಾಗತಿಸಿದರು. ಪ್ರೊ. ಅಹಮದ್ ಖಲೀಲ್ ವಂದಿಸಿದರು.
ವ್ಯವಹಾರ ಮೇಳದಲ್ಲಿ ಸುಮಾರು 18 ವ್ಯಾಪಾರ ಮಳಿಗೆಗಳಿಗೆ ಗಣ್ಯರು ಭೇಟಿ ನೀಡಿ, ಯುವ ವಿದ್ಯಾರ್ಥಿ ಉದ್ಯಮಿಗಳಿಗೆ ಉಪಯುಕ್ತವಾದ ವ್ಯವಹಾರದ ಚಾಕಚಕ್ಯತೆಯನ್ನು ಕುರಿತು ವಿವರಿಸಿದರು. ಈ ಬಿಸಿನೆಸ್ ಫೆಸ್ಟ್ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲನೇ ಹಂತ ವ್ಯವಹಾರದ ಯೋಜನೆಯ ಕುರಿತು, ಎರಡನೇ ಹಂತ ವ್ಯವಹಾರದ ಕಾರ್ಯರೂಪ, ತೃತೀಯ ಹಂತ ಹಣಕಾಸಿನ ವಿವರಗಳ ಪಟ್ಟಿ ಕಾರ್ಯಗಳ ಮೂಲಕ ನೆರವೇರುತ್ತದೆ. ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಟಾಲ್‌ಗಳು ಮತ್ತು ವಿವಿಧ ಉಪಯುಕ್ತ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ತಮ್ಮ ವ್ಯಾಪಾರ ನಿರ್ವಹಣಾ ಸಾಮರ್ಥ್ಯವನ್ನು ಪ್ರದರ್ಶಿಸಿದರು.
Comments are closed.