
ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕಾಯ್ದೆ ರೂಪಿಸಲು ರಾಜ್ಯದ ಸಂಸದರೊಂದಿಗೆ ಪ್ರಧಾನಿ ಅವರಲ್ಲಿ ವಿನಂತಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸುವ ಬಗೆಗೆ ಕಾಯ್ದೆಯನ್ನು ಸರ್ಕಾರ ರೂಪಿಸಿ ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅವರು ಇದಕ್ಕೆ ಸಂವಿಧಾನದಲ್ಲಿಯೇ ತಿದ್ದುಪಡಿಯಾಗಬೇಕಿರುವುದರಿಂದ ಈ ಕುರಿತು ತೀರ್ವನ ಕೈಗೊಳ್ಳುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ ಎಂದರು. ಆಗ ರಾಜ್ಯದ ಎಲ್ಲ ಸಂಸದರು, ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಯವರೊಂದಿಗೆ ಪ್ರಧಾನಿ ಬಳಿ ಹೋಗಿ ವಿನಂತಿಸಿಕೊಳ್ಳಲಾಗಿದೆ ಎಂದರು.
308 ಶಾಲೆಗಳಿಗೆ ಅನುದಾನ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 308 ಖಾಸಗಿ ಶಾಲೆಗಳನ್ನು ಅನುದಾನಕ್ಕೊಳಪಡಿಸಲಾಗಿದೆ. ಬಿಇಡಿ ಮಾಡದ ಶಿಕ್ಷಕರು, ಉಪನ್ಯಾಸಕರಿಗೆ ಸಂಬಳ ಕೊಟ್ಟು ಬಿಇಡಿ ಮಾಡಿಸಿ ಅವರನ್ನು ಸೇವೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ ಎಂದರು. ಶಿಕ್ಷಕರ ವರ್ಗಾವಣೆ ನೀತಿಯನ್ನು ಮಾರ್ಪಾಡು ಮಾಡಿದ್ದೇವೆ. ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಕರು ನಾಲ್ಕು ಇನ್ಕ್ರಿಮೆಂಟ್ ಕೇಳಿದ್ದರು. ಇದರಿಂದ ಸರ್ಕಾರಕ್ಕೆ 800-900 ಕೋಟಿ ಆರ್ಥಿಕ ಹೊರೆ ಆಗುವುದರಿಂದ ಒಂದು ಇನ್ಕ್ರಿಮೆಂಟ್ ಕೊಡಲಾಗಿದೆ ಎಂದರು. ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗೂ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ರೀತಿಯಲ್ಲಿ ಆನ್ಲೈನ್ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಚಿಂತನೆಯಿದೆ ಎಂದು ರತ್ನಾಕರ ತಿಳಿಸಿದರು. ಮೆಡಿಕಲ್, ಇಂಜಿನಿಯರಿಂಗ್ನಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿದ್ದು, ಅಲ್ಲಿ ಇದು ಸುಲಭ ಸಾಧ್ಯ. ಆದರೆ, ಎಸ್ಸೆಸ್ಸೆಲ್ಸಿ, ಪಿಯುದಲ್ಲಿ ಅನುಷ್ಠಾನ ಸುಲಭವಿಲ್ಲ. ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಿವೆ.
ಆನ್ಲೈನ್ ಪ್ರಶ್ನೆ ಪತ್ರಿಕೆ ಮಾಡಿ ಒಂದು ವೇಳೆ ಅದು ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸೌಲಭ್ಯ ಸಿಗದೆ ಪ್ರಶ್ನೆಪತ್ರಿಕೆ ಡೌನ್ಲೋಡ್ ಆಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ, ಪ್ರಯೋಗ ನಡೆದಿದೆ ಎಂದರು.
Comments are closed.