ಕರ್ನಾಟಕ

ಕ್ರಿಕೆಟ್ ಬೆಟ್ಟಿಂಗ್:ನಾಲ್ವರ ಬಂಧನದೊಂದಿಗೆ 2.24 ಲಕ್ಷ ರೂ. ವಶ

Pinterest LinkedIn Tumblr

Cricket Betting

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿವಿಧೆಡೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ದಾಳಿ ನಡೆಸಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿ ಹಣ, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ವರದಿ: ಹಣವನ್ನು ಪಣವಾಗಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಧಿಸಿ 2.24 ಲಕ್ಷ ರೂ. ನಗದು ಹಾಗೂ 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರದ ದಿನೇಶ್ ಬಂಧಿತ ಆರೋಪಿಯಾಗಿದ್ದು, ಈತನಿಂದ ಹಣ, 2 ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಲ್ಲಿನ ಕಾನಿಷ್ಕ ಹೊಟೇಲ್, 3ನೆ ಮಹಡಿಯ ರೂಮ್‌ವೊಂದರಲ್ಲಿ ವ್ಯಕ್ತಿಯೊಬ್ಬ ವಿಶಾಖಪಟ್ಟಣಂನ ವೈ.ಎಸ್.ಆರ್.ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಕ್ಕೆ ಕಿಂಗ್ಸ್ ಇಲವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ತಂಡಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯಕ್ಕೆ ಸಾರ್ವಜನಿಕರನ್ನು ಫೋನ್‌ಗಳ ಮೂಲಕ ಸಂಪರ್ಕಿಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ರೂಮ್ ಮೇಲೆ ದಾಳಿ ಮಾಡಿ ಜೂಜಾಟ ಆಡಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ ವರದಿ:

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ ಬೆಂಡಿಗೇರಿ ಪೊಲೀಸರು ಒಂದು ಟಿವಿ, ನಾಲ್ಕು ಮೊಬೈಲ್ ಹಾಗೂ 8,900 ರೂ. ವಶಪಡಿಸಿಕೊಂಡಿದ್ದಾರೆ. ನಿಂಗೂಸಾ ಹಬೀಬ್ (53), ಅನೀಲ ಬದ್ಧಿ (45) ಹಾಗೂ ಮಹೇಶ್ ಬದ್ದಿ ಬಂಧಿತರು. ಗೊಲ್ಲರ ಕಾಲೋನಿಯಲ್ಲಿ ಐಪಿಎಲ್‌ನ ಆರ್‌ಸಿಬಿ ಹಾಗೂ ದೆಹಲಿ ಪಂದ್ಯಗಳ ನಡುವೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ಪಡೆದ ಪೊಲೀಸರು ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪಿಐ ವಿನೋದ್ ಕುಮಾರ್ ನೇತೃತ್ವದ ತಂಡ ಯಶಸ್ವಿಯಾಗಿದೆ.

Comments are closed.