ಕರ್ನಾಟಕ

ರಾಜಕಾರಣಿಗಳನ್ನು ತಯಾರು ಮಾಡುವ ರಾಜಕೀಯ ತರಬೇತಿ ಕೇಂದ್ರ ಸ್ಥಾಪನೆ …?

Pinterest LinkedIn Tumblr

dks

ಬೆಂಗಳೂರು: ವೈದ್ಯಕೀಯ ಕಾಲೇಜುಗಳ ಮೂಲಕ ವೈದ್ಯರನ್ನು, ಎಂಜಿನಿಯರಿಂಗ್ ಕಾಲೇಜುಗಳ ಮೂಲಕ ಇಂಜಿನಿಯರ್‌ಗಳನ್ನು ಹಾಗೂ ನರ್ಸಿಂಗ್ ಕಾಲೇಜುಗಳ ಮೂಲಕ ನರ್ಸ್‌ಗಳನ್ನು ತಯಾರು ಮಾಡುವ ರೀತಿಯಲ್ಲಿ ರಾಜಕೀಯ ತರಬೇತಿ ಕೇಂದ್ರಗಳ ಮೂಲಕ ರಾಜಕಾರಣಿಗಳನ್ನು ತಯಾರು ಮಾಡುವ ವಿನೂತನ ಪ್ರಯೋಗಕ್ಕೆ ಯುವ ನಾಯಕ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಶಿಕ್ಷಕರ ಕಾಲೇಜುಗಳ ಮೂಲಕ ಶಿಕ್ಷಕರನ್ನು ತಯಾರು ಮಾಡಲಾಗುತ್ತದೆ.

ವಿವಿಧ ರಂಗಗಳಲ್ಲಿ ತರಬೇತಿಗಳನ್ನು ನೀಡುವ ಮೂಲಕ ವಿವಿಧ ಸಾಧಕರನ್ನು ರೂಪಿಸಲಾಗುತ್ತದೆ. ಶೇ.50ರಷ್ಟು ಹೆಚ್ಚು ಇರುವ ಯುವಜನತೆಯಲ್ಲಿ ರಾಜಕೀಯವಾಗಿ ಹೆಚ್ಚು ಆಸಕ್ತಿ ಇದ್ದರೂ ರಾಜಕೀಯ ತರಬೇತಿ ಕೇಂದ್ರಗಳು ಇಲ್ಲ ಎಂಬುದನ್ನು ಮನಗಂಡಿರುವ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಜಕೀಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಿಯಾಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದಲ್ಲೇ ರಾಜಕೀಯ ತರಬೇತಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಕೇಂದ್ರದ ನಾಯಕರನ್ನು ಈ ತರಬೇತಿ ಕೇಂದ್ರಗಳ ಪ್ರಾರಂಭಕ್ಕೆ ಆಹ್ವಾನಿಸಲು ತೀರ್ಮಾನಿಸಿದ್ದಾರೆ.

ಇವರ ಈ ಹೊಸ ಚಿಂತನೆಗೆ ದೆಹಲಿಯ ನಾಯಕರು ಕೂಡ ಸಾಥ್ ನೀಡಿದ್ದು, ಯುವಕರಲ್ಲಿ ರಾಜಕೀಯ ಆಸಕ್ತಿ ಬೆಳೆಸಲು ಇದೊಂದು ಉತ್ತಮ ಪ್ರಯತ್ನವಾಗಿದ್ದು, ಇದನ್ನು ತ್ವರಿತವಾಗಿ ನಡೆಸಿ ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಸಕ್ತಿವುಳ್ಳವರನ್ನು ಗುರುತಿಸಿ ರಾಜಕೀಯ ತರಬೇತಿ ನೀಡಿ ಭವಿಷ್ಯದ ಉತ್ತಮ ರಾಜಕಾರಣಿಗಳನ್ನಾಗಿ ರೂಪಿಸುವ ನೀಲಿ ನಕ್ಷೆಯನ್ನು ಡಿ.ಕೆ.ಶಿವಕುಮಾರ್ ರೂಪಿಸಿದ್ದಾರೆ.

ವಿಶ್ವವಿದ್ಯಾನಿಲಯಗಳ ನಿವೃತ್ತ ಪ್ರೊಫೆಸರ್‌ಗಳು, ಮಾಜಿ ಸ್ಪೀಕರ್, ಮಾಜಿ ಸಭಾಪತಿಗಳು, ಹಿರಿಯ ರಾಜಕಾರಣಿಗಳು, ಸಂಸದೀಯ ಪಟುಗಳು ಸಂವಿಧಾನದ ಬಗ್ಗೆ ಹೆಚ್ಚು ಪಾಂಡಿತ್ಯವುಳ್ಳವರು ಈ ತರಬೇತಿ ಕೇಂದ್ರ ಸೇರುವವರಿಗೆ ತಮ್ಮ ಅನುಭವವನ್ನು ಧಾರೆಯೆರೆಯಲಿದ್ದಾರೆ. ಈ ಒಂದು ಉತ್ತಮ ಯೋಜನೆ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿಸ್ತರಿಸಬೇಕೆಂಬ ಚಿಂತನೆ ಡಿಕೆಶಿಯವರದ್ದಾಗಿದೆ.

(ಈ ಸಂಜೆ)

Comments are closed.