ಕರ್ನಾಟಕ

ತವರಿನಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಿಎಂ ಧೈರ್ಯವಿದ್ದರೆ ಹೇಳಲಿ : ಈಶ್ವರಪ್ಪ ಸವಾಲು

Pinterest LinkedIn Tumblr

shಮೈಸೂರು, ಮೇ 18- ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಜನ ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ವರುಣಾದಲ್ಲೇ ಕಾಂಗ್ರೆಸ್‌ಅನ್ನು ತಿರಸ್ಕರಿಸಿದ್ದಾರೆ. ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಧೈರ್ಯವಿದ್ದರೆ ಹೇಳಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಸವಾಲು ಹಾಕಿದ್ದಾರೆ. ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವೇಳೆ ಹಾಜರಿದ್ದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈಸೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ನಿಲ್ಲಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ವಿಷಯ ತಿಳಿದಿರುವ ಪದವೀಧರರು ಕಾಂಗ್ರೆಸ್‌ಅನ್ನು ಬೆಂಬಲಿಸುವುದಿಲ್ಲ. ಹಾಗಾಗಿ ಕಾಂಗ್ರೆಸ್ ಸೋಲು ನಿಶ್ಚಿತ ಎಂದರು. ನಡೆಯಲಿರುವ ನಾಲ್ಕೂ ಕ್ಷೇತ್ರಗಳ ಪದವೀಧರರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲೂ ಗೊಂದಲವಿದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ರವೀಂದ್ರ ವಿರುದ್ಧ ಅವರ ಕಾರ್ಯಕರ್ತರಲ್ಲೇ ಅಸಮಾಧಾನವಿದೆ. ಅವರು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

ಮೈಸೂರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ತಡೆಯಲು ಆಗುತ್ತಿಲ್ಲ ಎಂದು ಸ್ವತಃ ಎಸ್‌ಪಿ ಹೇಳಿದ್ದಾರೆ. ನಾವು ತಡೆಯಲು ಹೋದರ ನಮ್ಮ ಮೇಲೇ ಹಲ್ಲೆ ನಡೆಯುತ್ತದೆ. ನಮ್ಮ ಮತ್ತು ನಮ್ಮ ಕುಟುಂಬದವರಿಗೆ ರಕ್ಷಣೆ ಇಲ್ಲ. ಹೇಗೆ ತಡೆಯಲಿ ಎಂದು ಹೇಳಿರುವ ರೆಕಾರ್ಡ್ ಸಹ ನಮ್ಮ ಬಳಿ ಇದೆ ಎಂದರು. ಗ್ರಾಮೀಣರೇ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ತಿರಸ್ಕರಿಸಿದ್ದಾರೆ. ಇನ್ನು ಪದವೀಧರರು ಅವರನ್ನು ಆಯ್ಕೆ ಮಾಡಲಾರರು ಎಂದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಆಡಳಿತ ಸಂಪೂರ್ಣ ವಿಫಲವಾಗಿದೆ. ಒಂದು ಕಡೆ ಮನೆ ಕಟ್ಟಲು ಮರಳು ಸಿಗದಂತಾಗಿದ್ದರೆ ಮತ್ತೊಂದು ಕಡೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದೆ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದರೊಂದಿಗೆ ಸಚಿವರ ಅಕ್ರಮ ಬಯಲಿಗೆ ಬಂದಿದೆ.

ಈ ಬಾರಿ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಶಾಸಕರ ಮೂಗಿಗೆ ಸಂಪುಟ ಪುನಾರಚನೆ ಎಂಬ ತುಪ್ಪ ಸವರುತ್ತಿದ್ದಾರೆ. ಸಂಪುಟ ಪುನಾರಚನೆ ಎಂಬ ಮಾತನ್ನು 27 ಬಾರಿ ಇದುವರೆಗೂ ಪುನರಾವರ್ತಿಸಿದ್ದಾರೆ. ಈಗ ಕುರ್ಚಿ ಅಲುಗಾಡುತ್ತಿದೆ. ಬೇರೆ ಶಾಸಕರನ್ನು ತಮ್ಮ ಪರ ಮಾಡಿಕೊಳ್ಳುವ ಉದ್ದೇಶದಿಂದ ಮತ್ತೆ ಈ ತಂತ್ರ ಅನುಸರಿಸುತ್ತಿದ್ದಾರೆ ಎಂದು ಕುಟುಕಿದರು.

ಉತ್ತರಕುಮಾರರು ನಾವಲ್ಲ:

ಮಹದಾಯಿ ನದಿನೀರಿನ ವಿಷಯದಲ್ಲಿ ನಾವು ಉತ್ತರಕುಮಾರರಾಗಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೃಹನ್ನಳೆಯಂತೆ ಆಡುತ್ತಿದ್ದಾರೆ. ಮಹದಾಯಿ ವಿಚಾರದಲ್ಲಿ ನಾವು ಸರಿಯಾಗಿಯೇ ಮಾತನಾಡಿದ್ದೇವೆ. ಆದರೆ, ಸೋನಿಯಾಗಾಂಧಿಯವರು ಗೋವಾ ಜನರಿಗೆ ಕರ್ನಾಟಕಕ್ಕೆ ನೀರು ಬಿಡಬೇಡಿ ಎಂದು ಕರೆಕೊಟ್ಟಿದ್ದರು. ಅವರ ಪಕ್ಷದವರೇ ಈ ರೀತಿ ವರ್ತಿಸಿದರೆ ಉತ್ತರ ಕುಮಾರರು ನಾವೋ, ಅವರೋ ನೀವೇ ನಿರ್ಧರಿಸಿ ಎಂದರು. ಬರ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ಜನತೆಗೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

Comments are closed.