ಬೆಂಗಳೂರು,ಮೇ 18- ಬಿಎಂಟಿಸಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಸ್ ಕೆಳಗೆ ವಾಹನ ಸಿಲುಕಿಕೊಂಡರೂ ಪವಾಡ ಸದೃಶ್ಯದಂತೆ ವಾಹನ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ರಾಜಾಜಿನಗರ ಓಲ್ಡ್ ಪೊಲೀಸ್ ಸ್ಟೇಷನ್ ಬಸ್ ನಿಲ್ದಾಣದ ಬಳಿ ಇಎಸ್‌ಐ ಜಂಕ್ಷನ್ ಸಮೀಪ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ. ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಹಳೇ ಪೊಲೀಸ್ ಸ್ಟೇಷನ್ ನಿಲ್ದಾಣ ಮುಂದಿನ ತಿರುವಿನಲ್ಲಿ ಬಸ್ ಚಾಲಕ ವೇಗವಾಗಿ ನುಗ್ಗಿದ್ದಾನೆ. ಇದೇ ವೇಳೆ ದ್ವಿಚಕ್ರವಾಹನ ಸವಾರ ಕೂಡ ನುಗ್ಗಿದ್ದರಿಂದ ಬಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ.
ಬಸ್ ನುಗ್ಗಿದ ರೀತಿ ಅರಿತನೋ ಏನೋ ಸವಾರ ವಾಹನದಿಂದ ಜಂಪ್ ಮಾಡಿ ಇತ್ತ ಹಾರಿದ್ದರಿಂದ್ದ ಬಚಾವಾಗಿದ್ದಾನೆ. ದ್ವಿಚಕ್ರ ವಾಹನ ಬಸ್‌ನಡಿ ಸಿಕ್ಕಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತ ಕಂಡೊಡನೆ ಜನ ಸೇರಿದ್ದಾರೆ. ಬಸ್ ಡಿಕ್ಕಿಯಾಗುತ್ತಿದ್ದಂತೆಯೇ ದ್ವಿಚಕ್ರವಾಹನ ಬಸ್ ಚಕ್ರಕ್ಕೆ ಸಿಲುಕಿದ್ದರಿಂದ ಅದರ ಸವಾರ ಸ್ಥಳದಲ್ಲೇ ಮೃತಪಟ್ಟಿರಬಹುದೆಂದು ತಿಳಿದ ಬಸ್ ಚಾಲಕ ಬಸ್ ಅಲ್ಲೇ ಬಿಟ್ಟು ಪರಾರಿಯಾಗಿ ಬಿಟ್ಟಿದ್ದಾನೆ. ಅದೃಷ್ಟವಶಾತ್ ಸವಾರ ಪಾರಾಗಿದ್ದು, ಬೈಕ್ ಮಾತ್ರ ಪಚಡಿಯಾಗಿದೆ. ಗಾಬರಿಗೊಳಗಾಗಿದ್ದ ಸವಾರನನ್ನು ಸ್ಥಳೀಯರು ಉಪಚರಿಸಿದ್ದಾರೆ.
Comments are closed.