ಬೆಂಗಳೂರು,ಮೇ 18-ಬೀದಿಬದಿ ವ್ಯಾಪಾರಿಗಳೇ ಎಚ್ಚರ. ಇನ್ನು ಮುಂದೆ ಬೀದಿಬದಿ ತರಕಾರಿ, ಹಣ್ಣು ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದಿಲ್ಲದೆ ಭಾರೀ ಪ್ರಮಾಣದ ದಂಡ ವಿಧಿಸಲು ಬಿಬಿಎಂಪಿ ಸಿದ್ಧವಾಗಿದೆ. ಬೀದಿಬದಿ ವ್ಯಾಪಾರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಈಗಾಗಲೇ ಹೈಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ಬೃಹತ್ ಕಾರ್ಯಾಚರಣೆ ಹಮ್ಮಿಕೊಂಡಿದೆ. ರಸ್ತೆಬದಿ ವ್ಯಾಪಾರಿಗಳಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ, ಕೂಡಲೇ ಸ್ವಯಂಪ್ರೇರಿತವಾಗಿ ತೆರವುಗೊಳಿಸುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಪಾದಚಾರಿ ಮಾರ್ಗ ಮತ್ತು ಒತ್ತುವರಿ ತೆರವಿಗೆ ಈಗಾಗಲೇ ವಿಶೇಷ ತಂಡ ರಚಿಸಿದ್ದು , ಇವರು ಯಾವ ಸಮಯದಲ್ಲಾದರೂ ದಾಳಿ ನಡೆಸಿ ದಂಡ ವಿಧಿಸುತ್ತಾರೆ. ಹಾಗಾಗ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ವ್ಯಾಪಾರವನ್ನು ತೆರವುಗೊಳಿಸಬೇಕು, ಅಂಗಡಿ ಮಾಲೀಕರು ವ್ಯಾಪಾರ ವಹಿವಾಟಿಗಾಗಿ ತಮ್ಮ ಅಂಗಡಿಗಳ ಮೇಲ್ಛಾವಣಿಯನ್ನು ರಸ್ತೆವರೆಗೂ ವಿಸ್ತರಿಸಿದ್ದು, ಅದನ್ನು ಕೂಡ ತೆರವುಗೊಳಿಸಿದ್ದು, ಪಾದಚಾರಿಗಳ ಹಿತದೃಷ್ಟಿಯಿಂದ ಹಲವಾರು ಪಾದಚಾರಿ ಮಾರ್ಗಗಳನ್ನು ಅಭಿವೃದ್ದಿ ಪಡಿಸಲಾಗಿದೆ.
ಆದರೆ ತಳ್ಳುಗಾಡಿ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಸಂಚಾರಕ್ಕೆ ತೊಂದರೆಯನ್ನುಂಟು ಮಾಡುವುದಲ್ಲದೆ ಅಪಘಾತಗಳಿಗೂ ಕಾರಣರಾಗುತ್ತಿದ್ದಾರೆ. ಅದೇ ರೀತಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಬಳಸುವ ಜಲ್ಲಿ, ಕಲ್ಲು , ಮಣ್ಣು ಹಾಗೂ ತ್ಯಾಜ್ಯವನ್ನು ರಸ್ತೆ ಮಾರ್ಗದಲ್ಲಿ ಹಾಕುವುದು ದಂಡಾರ್ಹ ಅಪರಾಧವಾಗಿರುತ್ತದೆ. ಅಲ್ಲದೆ ಅಡ್ಡಾದಿಡ್ಡಿ ವಾಹನ ನಿಲುಗಡೆಯೂ ಸಹ ಅಪರಾಧವಾಗಿದ್ದು , ಇನ್ನು ಮುಂದೆ ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುವುದು, ಮೇಲ್ಛಾವಣಿ ವಿಸ್ತರಿಸುವುದು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಂಡು ದಂಡ ವಿಧಿಸಿ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.