ಕರ್ನಾಟಕ

ಅಬ್ಬಾ … ! ಮಳೆ ಬಂದು ತಾಪವೂ ಇಳಿಯಿತು, ವಿದ್ಯುತ್ ಬೇಡಿಕೆಯೂ ಇಳಿಯಿತು

Pinterest LinkedIn Tumblr

rainnಬೆಂಗಳೂರು, ಮೇ 18- ಭೀಕರ ಹಾಗೂ ಸುಡು ಬೇಸಿಗೆಯಿಂದ ತತ್ತರಿಸಿದ ರಾಜ್ಯದ ಬಹುತೇಕ ಕಡೆ ಈಗ ತಂಪಾದ ವಾತಾವರಣವಿದೆ. ಇದಕ್ಕೆ ಮುಂಗಾರು ಪೂರ್ವ ಮಳೆಯೇ ಕಾರಣ. ಕಳೆದ ಎರಡು ವಾರಗಳಿಂದ ಬೀಳುತ್ತಿರುವ ಮಳೆಯಿಂದ ತಾಪಮಾನ ಗಣನೀಯವಾಗಿ ಇಳಿಕೆಯಾಗಿರುವುದರ ಜತೆಗೆ ರಾಜ್ಯದ ವಿದ್ಯುತ್ ಬೇಡಿಕೆ ಗಣನೀಯವಾಗಿ ಇಳಿಕೆಯಾಗಿದೆ. ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಈಗ 30ರಿಂದ 35 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುತ್ತಿದೆ. ನೆತ್ತಿ ಸುಡುವ ಬಿಸಿಲಿಗೆ ಬೇಸತ್ತಿರುವ ಜನತೆ ಈಗ ನಿಟ್ಟುಸಿರು ಬಿಡುವಂತಾಗಿದೆ.

ಸರಾಸರಿ 30ಸಾವಿರ ಯೂನಿಟ್‌ನಷ್ಟು ನಿತ್ಯದ ಬೇಡಿಕೆ ಇಳಿಕೆಯಾಗಿದೆ. ತೀವ್ರ ಬೇಸಿಗೆಯಿಂದಾಗಿ ವಿದ್ಯುತ್ ಬೇಡಿಕೆ 211 ದಶಲಕ್ಷ ಯೂನಿಟ್‌ವರೆಗೂ ರಾಜ್ಯದ ದೈನಂದಿನ ಬೇಡಿಕೆ ಇತ್ತು. ನಿನ್ನೆ ರಾಜ್ಯದ ವಿದ್ಯುತ್ ಬೇಡಿಕೆ 176 ದಶಲಕ್ಷ ಯೂನಿಟ್‌ನಷ್ಟಿತ್ತು. ಕಳೆದ ವರ್ಷ ಇದೇ ದಿನ 137ದಶಲಕ್ಷ ಯೂನಿಟ್‌ನಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬೇಡಿಕೆ ಹೆಚ್ಚಿದೆ. ಆದರೂ ಕಳೆದ ಎರಡು ವಾರಗಳ ಹಿಂದೆ ಇದ್ದ ತೀವ್ರವಾದ ಬೇಡಿಕೆ ಈಗ ಇಲ್ಲ.

ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ, ವರಾಹಿ ಮತ್ತಿತರ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಮೇ ಅಂತ್ಯದವರೆಗೆ ಮಾತ್ರ ವಿದ್ಯುತ್ ಉತ್ಪಾದನೆಗೆ ಸಾಕಾಗಲಿದೆ. ಅಷ್ಟರಲ್ಲೇ ಮಳೆ ಬಂದರೆ ಜಲವಿದ್ಯುತ್ ಉತ್ಪಾದನೆ ಸುಗಮವಾಗಿ ನಡೆಯಲಿದೆ. ಇಲ್ಲದಿದ್ದರೆ ಕಷ್ಟವಾಗಲಿದೆ. ಈಗ ವಾಯುಭಾರ ಕುಸಿತದಿಂದಾಗಿ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆದರೂ ಜಲಾಶಯಗಳಿಗೆ ಹೆಚ್ಚಿನ ಒಳಹರಿವು ಬರುತ್ತಿಲ್ಲ.

ಕಳೆದ ಎರಡು ವಾರಗಳಿಂದ ರಾಜ್ಯದ ಬಹುತೇಕ ಕಡೆ ಚದುರಿದಂತೆ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಕೃಷಿ ಪಂಪ್‌ಸೆಟ್‌ಗಳ ಬಳಕೆಯೂ ಕೂಡ ಇಳಿಮುಖವಾಗಿದೆ. ಅಲ್ಲದೆ, ಸೆಖೆ ನೀಗಿಸಿಕೊಳ್ಳಲು ಫ್ಯಾನ್, ಕೂಲರ್ ಬಳಕೆಯೂ ಕೂಡ ಕಡಿಮೆಯಾಗಿದೆ. ಅಲ್ಲದೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದರ ಪರಿಣಾಮದಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಇನ್ನು ಮೂರು ದಿನಗಳ ಕಾಲ ರಾಜ್ಯದಲ್ಲಿ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆಯಲಿದೆ. ಇದರಿಂದ ವಿದ್ಯುತ್ ಬೇಡಿಕೆ ಮತ್ತಷ್ಟು ಇಳಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.

Comments are closed.