ಕರ್ನಾಟಕ

ಕೆಲವರು ಪಾಸ್- ಉಳಿದವರಿಗೆ ಗೇಟ್‌ಪಾಸ್ ! ಸಂಪುಟ ಸೇರ್ಪಡೆ ; ಸಿಎಂಗೆ ಹೈಕಮಾಂಡ್ ಬುಲಾವ್

Pinterest LinkedIn Tumblr

siddu

ಬೆಂಗಳೂರು: ಸಂಪುಟ ಪುನಱ್ರಚನೆಗೆ ಕಾಲ ಕೂಡಿಬರುತ್ತಿದ್ದಂತೆ, ಅದಕ್ಷ ಎಂಬ ಕಳಂಕ ಹೊತ್ತಿರುವ ಸಚಿವರ ಎದೆ ಬಡಿತ ಜೋರಾಗಿದೆ. ಶತಾಯ – ಗತಾಯ ಸಚಿವ ಸ್ಥಾನದಲ್ಲಿ ಮುಂದುವರಿಯಲು ಪಣ ತೊಟ್ಟಿರುವ ಕೆಲ ಸಚಿವರು ಬಿರುಸಿನ ಲಾಬಿ ನಡೆಸಿದ್ದಾರೆ.

ಪಕ್ಷದ ಹೈಕಮಾಂಡ್‌ನ ಒಪ್ಪಿಗೆ ಪಡೆದು ಸಚಿವ ಸಂಪುಟ ಪುನಱ್ರಚಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೆಲವರನ್ನು ಸಂಪುಟದಲ್ಲಿ ಉಳಿಸಿಕೊಂಡು ಉಳಿದವರಿಗೆ ಗೇಟ್‌ಪಾಸ್ ನೀಡಲು ಮುಂದಾಗಿದ್ದಾರೆ.

ಈ ತಿಂಗಳು 22 ರಂದು ದೆಹಲಿಗೆ ಬರುವಂತೆ ಸಿದ್ದುಗೆ ಹೈಕಮಾಂಡ್ ಬುಲಾವ್ ನೀಡಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಸಚಿವ ಸ್ಥಾನ ಆಕಾಂಕ್ಷಿಗಳು ರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.

‘ಗಾಡ್ ಫಾದರ್’ಗಳ ಮೂಲಕ ಸಚಿವ ಪಟ್ಟ ದಕ್ಕಿಸಿಕೊಳ್ಳಲು ಒತ್ತಡ ಹೇರಿದ್ದಾರೆ. ದೆಹಲಿ ವರಿಷ್ಠರನ್ನು ಭೇಟಿ ಮಾಡಲು ಈ ತಿಂಗಳು 20 ಇಲ್ಲವೇ 21 ರಂದು ಮುಖ್ಯಮಂತ್ರಿ ಸಿದ್ದು ದೆಹಲಿಗೆ ತೆರಳಲಿದ್ದಾರೆ.

ಈ ತಿಂಗಳು ಎರಡು ಬಾರಿ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆಗಳ ನಂತರ ಭೇಟಿಯಾಗುವಂತೆ ವರಿಷ್ಠರು ಸಿಎಂ ಅವರಿಗೆ ಸೂಚನೆ ನೀಡಿದ್ದರು.

ಅದರಂತೆ ಈಗ ಪಂಚ ರಾಜ್ಯಗಳ ಚುನಾವಣೆ ಮುಗಿದಿದ್ದು, ನಾಡಿದ್ದು ಮೇ 19 ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಗಾಗಿ ವರಿಷ್ಠರು 22 ರಂದು ಭೇಟಿಗೆ ಸಮಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ಸಂಪುಟ ಪುನಾರಚನೆಯಾದರೆ ಮುಖ್ಯಮಂತ್ರಿ ಕುರ್ಚಿ ಗಟ್ಟಿ, ಮುಂದೆ ಯಾವುದೇ ಕಂಟಕ ಇಲ್ಲ ಎಂಬುದನ್ನು ಅರಿತಿರುವ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆಗೆ ವರಿಷ್ಠರನ್ನು ಓಲೈಸುವ ಪ್ರಯತ್ನವನ್ನು ಈ ಭೇಟಿ ಸಂದರ್ಭದಲ್ಲಿ ನಡೆಸಲಿದ್ದಾರೆ.

ಸಾಧನೆ ಮಾಹಿತಿ

ರಾಜ್ಯಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಯ ಸಮಗ್ರ ಮಾಹಿತಿಯನ್ನು ಸಿಎಂ ವರಿಷ್ಠರ ಮುಂದೆ ಇಡಲಿದ್ದಾರೆ.

ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ವಿಚಾರಗಳನ್ನು ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ, ವಿಧಾನ ಪರಿಷತ್‌ಗೆ ಮೂವರು ನಾಮಕರಣ, ಸದಸ್ಯರ ನೇಮಕ ಎಲ್ಲದರ ಬಗ್ಗೆಯೂ ಚರ್ಚೆಗಳು ನಡೆಯಲಿವೆ ಎಂದು ಹೇಳಲಾಗಿದೆ.

ಡಾ. ಜಿ. ಪರಮೇಶ್ವರ್‌ಗೂ ಬುಲಾವ್

ಸರ್ಕಾರ ಹಾಗೂ ಪಕ್ಷದ ವಿಚಾರಗಳ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ದೆಹಲಿಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ರವರಿಗೂ ದೆಹಲಿಯ ವರಿಷ್ಠರಿಂದ ಬುಲಾವ್ ಬಂದಿದ್ದು, ಡಾ. ಜಿ. ಪರಮೇಶ್ವರ್ ಇದೇ ತಿಂಗಳ 21 ರಂದು ದೆಹಲಿಗೆ ತೆರಳುತ್ತಿರುವುದಾಗಿ ಈಗಾಗಲೇ ಹೇಳಿದ್ದಾರೆ.

ಹೈಕಮಾಂಡ್ ಜೊತೆಗಿನ ಭೇಟಿ ನಂತರ ಸಂಪುಟ ಪುನಾರಚನೆ ಆಗಲಿದೆಯೇ? ಇಲ್ಲವೆ ನಾಮಪತ್ರ ಬದಲಾಗಲಿದೆಯೇ? ಇಲ್ಲವೇ? ಎಂಬ ವಿಚಾರಗಳಿಗೆ ಸ್ಪಷ್ಟ ಉತ್ತರಗಳು ಸಿಗಲಿವೆ.

Comments are closed.