ಕರ್ನಾಟಕ

ರಾಜ್ಯಸಭೆ ವಿಧಾನಪರಿಷತ್ ಟಿಕೆಟ್‌ಗಾಗಿ ಜೆಡಿಎಸ್‌ನಲ್ಲಿ ಪೈಪೋಟಿ

Pinterest LinkedIn Tumblr

hdk

ಬೆಂಗಳೂರು: ವಿಧಾನಪರಿಷತ್ತು ಹಾಗೂ ರಾಜ್ಯಸಭೆ ಚುನಾವಣೆಗೆ ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್, ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ವಿಧಾನಸಭೆಯಲ್ಲಿ ಜೆಡಿಎಸ್ ಹೊಂದಿರುವ 40 ಶಾಸಕರ ಬಲದಿಂದ ವಿಧಾನಪರಿಷತ್‌ನ 7 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಹಾಲಿ ವಿಧಾನಪರಿಷತ್ ಸದಸ್ಯ ಎಂ.ಶ್ರೀನಿವಾಸ್ ಜೂ.14ರಂದು ನಿವೃತ್ತಿಯಾಗುತ್ತಾರೆ. ಜೆಡಿಎಸ್‌ನಿಂದ ಎರಡು ಬಾರಿ ಆಯ್ಕೆಯಾಗಿದ್ದ ಶ್ರೀನಿವಾಸ್ ಅವರಿಗೆ ಮೂರನೇ ಬಾರಿ ಆಯ್ಕೆಗೆ ಅವಕಾಶ ನೀಡುವುದು ಕಷ್ಟ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಶ್ರೀನಿವಾಸ್ ಬದಲಿಗೆ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಟರು ಉದ್ದೇಶಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಜೆಡಿಎಸ್‌ನ ವಿವಿಧ ಪದಾಧಿಕಾರಿಗಳು ನಾರಾಯಣರಾವ್ ಅವರನ್ನು ವಿಧಾನಪರಿಷತ್‌ಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂತೆ ವರಿಷ್ಠರಿಗೆ ಈಗಾಗಲೇ ಮನವಿ ಮಾಡಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಜೆಡಿಎಸ್ ಸ್ವತಂತ್ರವಾಗಿ ಒಂದೂ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ರಾಜ್ಯಸಭೆಗೆ ಒಬ್ಬ ಅಭ್ಯರ್ಥಿ ಆಯ್ಕೆಯಾಗಬೇಕಾದರೆ ಕನಿಷ್ಠ 57 ಶಾಸಕರ ಬೆಂಬಲ ಬೇಕಾಗಿದೆ. ಜೆಡಿಎಸ್‌ನಲ್ಲಿರುವುದು 40 ಶಾಸಕರು. ಹೀಗಾಗಿ 17 ಶಾಸಕರ ಕೊರತೆ ಇದೆ. ರಾಜ್ಯಸಭಾ ಅಭ್ಯರ್ಥಿ ಸ್ಥಾನಕ್ಕೆ ಜೆಡಿಎಸ್‌ನ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಸೇರಿದಂತೆ ಹಲವಾರ ಹೆಸರುಗಳು ಚಾಲ್ತಿಯಲ್ಲಿವೆಯಾದರೂ ಇನ್ನು ರಾಜ್ಯಸಭೆಗಾಗಲಿ, ವಿಧಾನಪರಿಷತ್‌ಗಾಗಲಿ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್ ಅಂತಿಮಗೊಳಿಸಿಲ್ಲ.

ಇಂದು ಅಧಿಸೂಚನೆ ಪ್ರಕಟವಾಗಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ವಿಧಾನಪರಿಷತ್ ಸದಸ್ಯ ಬಸವರಾಜಹೊರಟ್ಟಿ ಅವರನ್ನೇ ಕಣಕ್ಕಿಳಿಸಲಿದೆ. ದಕ್ಷಿಣ ಪದವೀಧರ ಕ್ಷೇತ್ರಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಜಗದೀಶ್ ನಡುವೆ ಪೈಪೋಟಿ ಇದ್ದು, ಇನ್ನು ಯಾರಿಗೆ ಟಿಕೆಟ್ ಎಂಬುದು ಸ್ಪಷ್ಟವಾಗಿಲ್ಲ. ವಾಯುವ್ಯ ಪದವೀಧರ ಕ್ಷೇತ್ರದಿಂದ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿ ಸಾತಗೌಡ ಪಾಟೀಲ್ ಅವರನ್ನು ಪ್ರಕಟಿಸಲಾಗಿದೆ. ಆದರೆ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರ ಪಕ್ಷದಲ್ಲಿ ಆಗಿಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Write A Comment