ಕರಾವಳಿ

ಟ್ಯೂಷನ್‌ಗೆ ಹೋಗದೆ ಶಾಲಾ ಪಾಠದಿಂದಲೇ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಗಳಿಸಿ ಇತಿಹಾಸ ಸೃಷ್ಟಿಸಿದ ರಂಜನ್ ! ಮುಂದೆ ವೈದ್ಯನಾಗುವ ಅಭಿಲಾಷೆ- ಇಷ್ಟೊಂದು ಅಂಕ ಗಳಿಸಲು ಪಟ್ಟ ಶ್ರಮ ಗೊತ್ತೇ..!

Pinterest LinkedIn Tumblr

Ranjan1

ಭದ್ರಾವತಿ: ‘ನನ್ನ ನಿರೀಕ್ಷೆ ಮೀರಿದ ಫಲಿತಾಂಶ ಬಂದಿರುವುದನ್ನು ಕೇಳಿದ ತಕ್ಷಣಕ್ಕೆ ನನಗೆ ಆಶ್ಚರ್ಯ ಉಂಟಾಯಿತು’ ಎಂದು ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿ ಬಿ.ಎಸ್. ರಂಜನ್, ಸಂತಸ ವ್ಯಕ್ತಪಡಿಸಿದ್ದಾನೆ.

ಮನೆಯಲ್ಲಿ ಮಲಗಿಕೊಂಡಿದ್ದೆ. ಫಲಿತಾಂಶ ಪ್ರಕಟವಾಗಿರುವ ಹಾಗೂ ನಾನು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದೇನೆ ಎಂಬ ಸುದ್ದಿ ಟಿ.ವಿ ಯಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಪೋಷಕರು ತಿಳಿಸಿದರು. ಟಿ.ವಿಯಲ್ಲಿ ನನ್ನ ಹೆಸರು ನೋಡಿದೆ. 618ರಿಂದ 620 ಅಂಕ ಬರಬಹುದು ಎಂಬ ನಿರೀಕ್ಷೆ ಇತ್ತು. 625 ಬಂದಿರುವುದನ್ನು ಕೇಳಿ ಆಶ್ಚರ್ಯ ಉಂಟಾಯಿತು ಎಂದು ರಂಜನ್ ಅಭಿಪ್ರಾಯ ಹಂಚಿಕೊಂಡ.

Ranjan

ಒತ್ತಡದಲ್ಲಿ ಓದಲಿಲ್ಲ. ದಿನಕ್ಕೆ ಆರು ತಾಸು ಓದುತ್ತಿದ್ದೆ. ಓದು ಮುಗಿದ ತಕ್ಷಣ ಟಿ.ವಿ ನೋಡುತ್ತಿದ್ದೆ. ‘ಟ್ಯೂಷನ್‌’ಗೆ ಹೋಗಲಿಲ್ಲ. ಶಾಲೆಯಲ್ಲಿ ಹೇಳುತ್ತಿದ್ದ ಪಾಠವನ್ನೇ ಸರಿಯಾಗಿ ಕೇಳುತ್ತಿದ್ದೆ. ಶಾಲೆಯಲ್ಲಿ ಫೆಬ್ರುವರಿಯಲ್ಲಿ ವಿಶೇಷ ತರಗತಿ ನಡೆಸಿದ್ದರು. ಅದು ಪ್ರಯೋಜನವಾಯಿತು. ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಪ್ರೋತ್ಸಾಹ ನೀಡಿದರು ಎಂದು ರಂಜನ್ ಸಂತಸ ವ್ಯಕ್ತಪಡಿಸಿದ.

ಭದ್ರಾವತಿ ನಗರದ ಕಡದಕಟ್ಟೆ ನಿವಾಸಿ, ವ್ಯಾಪಾರಿಯಾಗಿರುವ ತಂದೆ ಶಂಕರ ನಾರಾಯಣ ಆರ್‌.ಎಸ್‌. ಹಾಗೂ ತಾಯಿ ತ್ರಿವೇಣಿ ಅವರು, ‘ಪುತ್ರನ ಶ್ರಮಕ್ಕೆ ಫಲ ಲಭಿಸಿದೆ’ ಎಂದು ರಂಜನ್‌ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುತ್ರನಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

Ranjan2

‘ಮನೆಯಲ್ಲಿ ತಂದೆ, ತಾಯಿ ಪ್ರೋತ್ಸಾಹ ಚೆನ್ನಾಗಿತ್ತು. ಅವರಿಂದ ಓದಿಗೆ ಒತ್ತಡ ಇರಲಿಲ್ಲ. ಬದಲಾಗಿ ನಾನೇ ನನ್ನ ಮನೆಪಾಠ, ಅಭ್ಯಾಸ ಮುಗಿಸಿಕೊಳ್ಳುತ್ತಿದೆ. ಶಾಲೆಯಲ್ಲಿ ಅಮರೇಗೌಡ ಸರ್ ಬೆಂಬಲ ನನಗೆ ಸಹಕಾರಿಯಾಯಿತು’ ಎಂದು ಮಂದಹಾಸ ಬೀರಿದ. ಮುಂದೆ ವೈದ್ಯನಾಗುವ ಅಭಿಲಾಷೆ ಈ ವಿದ್ಯಾರ್ಥಿಯದ್ದು.

ತಾಯಿ ತ್ರಿವೇಣಿ ಸಂತಸಕ್ಕೆ ಪಾರವೇ ಇರಲಿಲ್ಲ. ‘ನನ್ನ ಮಗ ಎರಡನೇ ತರಗತಿಯಿಂದ ತರಗತಿಗೆ ಮೊದಲಿಗನಾಗಿದ್ದ. ಅವನ ಮೇಲೆ ನಮ್ಮ ಒತ್ತಡ ಇರಲಿಲ್ಲ. ಓದು ಮುಗಿದ ನಂತರ ಟಿ.ವಿ ನೋಡುವುದನ್ನು ಮಾತ್ರ ಅವನು ಎಂದೂ ನಿಲ್ಲಿಸಿರಲಿಲ್ಲ’ ಎಂದು ಹೇಳಿದರು.

‘ರಂಜನ್‌ನ ಅಕ್ಕ ರಚನಾ ಕೂಡ ಉತ್ತಮ ಅಂಕ ಪಡೆದು ಯಶಸ್ಸು ಕಂಡವಳು. ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಎಚ್.ಪಿ. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾಳೆ. ಇವನೂ ಅವಳ ಹಾಗೆ ಆಗಬೇಕು ಎಂದು ನಾನು ಬಯಸಿದ್ದೆ. ಇವನು ಅವಳಿಗಿಂತ ಹೆಚ್ಚು ಸಾಧಿಸಿದ್ದಾನೆ. ನಮ್ಮೆಲ್ಲರಿಗೂ ಇದು ಹೆಮ್ಮೆ’ ಎನ್ನುತ್ತಾರೆ ತಂದೆ ಬಿ.ಎಸ್.ಶಂಕರನಾರಾಯಣ.

‘ಜಿಲ್ಲೆಗೆ ನಮ್ಮ ಮಗ ಮೊದಲಿಗನಾಗಬೇಕು ಎಂಬ ಇಚ್ಛೆ ನಮ್ಮದಾಗಿತ್ತು. ಆದರೆ, ಈತ ರಾಜ್ಯಕ್ಕೆ ಮೊದಲಿಗನಾಗಿರುವುದು ನಮಗೂ ನಮ್ಮ ಸಂಸ್ಥೆಗೂ ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಪೂರ್ಣಪ್ರಜ್ಞ ಶಾಲೆಯ ಪ್ರಾಂಶುಪಾಲ ಅಮರೇಗೌಡ.

‘ಜನವರಿ ತಿಂಗಳಿನಿಂದ ವಿಶೇಷ ತರಗತಿ ಮಾಡಿದೆವು. ಅದರಲ್ಲಿ ಎರಡು ತರಗತಿಗಳನ್ನು ಮಾಡಿ ಒಂದರ ಉಸ್ತುವಾರಿ ಆತನಿಗೆ ನೀಡಲಾಗಿತ್ತು. ಥ್ರೋಬಾಲ್ ಜತೆಗೆ ಶಾಲೆಯ ಎಲ್ಲಾ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ರಂಜನ್, ಒಬ್ಬ ಉತ್ತಮ ವಿದ್ಯಾರ್ಥಿ’ ಎನ್ನುತ್ತಾರೆ ಶಾಲಾ ಕಾರ್ಯದರ್ಶಿ ಡಾ.ವಿನಿತ್ ಆನಂದ್. ಕಡದಕಟ್ಟೆ ವಾಸಿ ಶಂಕರನಾರಾಯಣ ಮತ್ತು ತ್ರಿವೇಣಿ ದಂಪತಿಯ ಪುತ್ರ ರಂಜನ್‌ ನರ್ಸರಿ ಶಿಕ್ಷಣದಿಂದ ಎಸ್‌ಎಸ್‌ಎಲ್‌ಸಿತನಕ ಪೂರ್ಣಪ್ರಜ್ಞ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ.

Write A Comment