ಕರ್ನಾಟಕ

ಸಚಿವ ಸಂಪುಟ ಪುನಾರಚನೆ : ಸಚಿವಾಕಾಂಕ್ಷಿಗಳು ದೆಹಲಿಯತ್ತ ದೌಡು

Pinterest LinkedIn Tumblr

sachiva

ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವಾಕಾಂಕ್ಷಿಗಳು ದೆಹಲಿಯತ್ತ ದೌಡಾಯಿಸತೊಡಗಿದ್ದಾರೆ.

ಇದೇ ಮೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರ ಜತೆ ಸಚಿವ ಸಂಪುಟ ಪುನಾರಚನೆ, ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿರುವ ಸುಳಿವರಿತ ಆಕಾಂಕ್ಷಿಗಳು ಈಗಾಗಲೇ ದೆಹಲಿಗೆ ಧಾವಿಸಿದ್ದು, ಹೈಕಮಾಂಡ್‌ನ ವರಿಷ್ಠರೊಂದಿಗೆ ಪ್ರಭಾವ ಬೀರಿ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಒಂದು ಮೂಲದ ಪ್ರಕಾರ, ಸಚಿವ ಸಂಪುಟ ಪುನಾರಚನೆ ಸಂಬಂಧ 12 ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಮೂರು ಜನ ಸಚಿವರಿಂದ ರಾಜೀನಾಮೆ ಪಡೆದು ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಕೇಳಿಬಂದಿದೆ. ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಅವಕಾಶ ನೀಡುವಂತೆ ಕೋರಿ ಹೈಕಮಾಂಡ್‌ಗೆ ಅಹವಾಲು ಸಲ್ಲಿಸಲು ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ಸಚಿವಾಕಾಂಕ್ಷಿಗಳಾದ ಕೆ.ಬಿ.ಕೋಳಿವಾಡ, ಎ.ಬಿ.ಮಾಲಕರೆಡ್ಡಿ, ಮಾಲಿಕಯ್ಯ ಗುತ್ತೇದಾರ್, ಬಸವರಾಜ ರಾಯರೆಡ್ಡಿ, ಎಸ್.ಎಸ್.ಮಲ್ಲಿಕಾರ್ಜುನ್, ಕಾಗೋಡು ತಿಮ್ಮಪ್ಪ, ರಮೇಶ್‌ಕುಮಾರ್, ಎಂ.ಕೃಷ್ಣಪ್ಪ, ನರೇಂದ್ರಸ್ವಾಮಿ, ಎಂ.ವೈ.ಗೋಪಾಲಕೃಷ್ಣ, ಮೋಟಮ್ಮ ಮುಂತಾದವರು ಪ್ರಬಲ ಆಕಾಂಕ್ಷಿಗಳಾಗಿದ್ದು, ತಮಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬಿದ್ದು, ಸಚಿವ ಸಂಪುಟ ಪುನಾರಚನೆ ಮಾಡಬೇಕು, ಹೊಸಬರಿಗೆ ಅವಕಾಶ ನೀಡಬೇಕೆಂಬ ಕೂಗು ಬಲವಾಗಿ ಕೇಳಿಬಂದಿದೆ. ಸರಣಿ ಚುನಾವಣೆಗಳು ಹಾಗೂ ಹಲವಾರು ಕಾರಣಗಳಿಂದ ಪುನಾರಚನೆಯನ್ನು ಮುಂದೂಡುತ್ತ ಬರಲಾಗುತ್ತಿದೆಯಾದರೂ ಈ ಬಾರಿ ಸಚಿವ ಸಂಪುಟ ಪುನಾರಚನೆ ಮಾಡಲೇಬೇಕಾಗಿದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಜತೆಜತೆಯಲ್ಲಿಯೇ ಸಚಿವ ಸಂಪುಟ ಪುನಾರಚನೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ.

2018ರ ವಿಧಾನಸಭೆ ಚುನಾವಣೆಗೆ ಹೊಸ ತಂಡವನ್ನು ಕಟ್ಟಬೇಕಾಗಿದೆ. ಹಾಲಿ ಇರುವ ಕಾಂಗ್ರೆಸ್ ಪಕ್ಷದ ಇಮೇಜನ್ನು ಬದಲಾಯಿಸುವ ಸಂಪುಟದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಚಿಸಿ ಸಂಪುಟಕ್ಕೆ ಹೊಸಬರನ್ನು ತೆಗೆದುಕೊಳ್ಳಬೇಕಾಗಿದೆ. ಅದೇ ರೀತಿ ಹಳಬರನ್ನು ಕೈಬಿಡಬೇಕಾಗಿದೆ. ಈ ಎಲ್ಲವನ್ನೂ ಅಳೆದು-ಸುರಿದು ಹೈಕಮಾಂಡ್ ಚಿಂತಿಸಿ ಸಂಪುಟ ಪುನಾರಚನೆ ಮಾಡಬೇಕಾಗಿದೆ. ಮೇ 21ರ ನಂತರ ಈ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಜೂನ್ ಮೊದಲ ವಾರದಲ್ಲಿ ಹೊಸ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಎಷ್ಟು ಜನರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ, ಎಷ್ಟು ಜನರನ್ನು ಕೈ ಬಿಡಲಾಗುತ್ತದೆ, ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಈಗ ಸಚಿವ ಸಂಪುಟದಿಂದ ಕೈ ಬಿಡುವವರಿಗೆ ಅದೇ ಜಾತಿ ಮತ್ತು ಪ್ರಾದೇಶಿಕಾವಾರು ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಈ ಎಲ್ಲವನ್ನೂ ಚಿಂತಿಸಿಯೇ ಸಚಿವ ಸಂಪುಟ ಪುನಾರಚನೆಗೆ ಸರ್ಕಾರ ಮುಂದಾಗಿದೆ. ಮುಂದೇನಾಗುತ್ತದೋ ಕಾದು ನೋಡಬೇಕು.

Write A Comment