ಕರ್ನಾಟಕ

ದುರಂತ ದಿನಕ್ಕೆ 30 ಬಲಿ : ರಾಜ್ಯದಲ್ಲಿ 8, ತೆಲಂಗಾಣ 15, ಆಂಧ್ರದಲ್ಲಿ 7 ಸಾವು

Pinterest LinkedIn Tumblr

GUNTUR_WALL-collapse

ಬಾಗಲಕೋಟೆ/ಹೈದರಾಬಾದ್/ಗುಂಟೂರು: ರಾಜ್ಯದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನ ಮೃತಪಟ್ಟಿದ್ದಾರೆ.

ಇದಲ್ಲದೆ ನೆರೆಯ ತೆಲಂಗಾಣದಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ 15 ಜನ ದುರಂತ ಸಾವು ಕಂಡಿದ್ದಾರೆ. ಇನ್ನು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಿನ್ನೆ ಸಂಜೆ ನಿರ್ಮಾಣ ಹಂತದ ಕಟ್ಟಡದ ಆವರಣದಲ್ಲಿ ಮಣ್ಣು ಕುಸಿದು 7 ಜನ ಸತ್ತಿದ್ದಾರೆ.

ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಎಂಟು ಜನ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಬಾಗಲಕೋಟ ಜಿಲ್ಲೆಯ ಲೋಕಾಪೂರ, ಬೆಳಗಾವಿ ಜಿಲ್ಲೆಯ ಕಿತ್ತೂರ ಬಳಿ ಸಂಭವಿಸಿದೆ.

ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಬಳಿ ಇಂದು ಮುಂಜಾನೆ ಟಂ ಟಂ ಹಾಗೂ ಟಿಪ್ಪರ ನಡುವೆ ಮುಖಾಮುಖಿ ಡಿಕ್ಕಿಯಾದ್ದರಿಂದ ಇಬ್ಬರು ಮಹಿಳೆಯರು, ಮೂವರು ಬಾಲಕರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟರೆ ತೀವ್ರವಾಗಿ ಗಾಯಗೊಂಡಿದ್ದ ಇನ್ನೋರ್ವ ವ್ಯಕ್ತಿ ಬಾಗಲಕೋಟ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಲಲಿತಾ(35), ರೇಷ್ಮಾ (18), ಯಮನೂರ (15), ಆನಂದ (10), ದರ್ಶನ(10) ಎಂಬುವವರು ಸ್ಥಳದಲ್ಲಿಯೆ ಸಾವನ್ನಪ್ಪಿದ್ದರೆ, ಅರ್ಜುನ್ (40) ಎಂಬಾತ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

ಇವರೆಲ್ಲ ವೀರಾಪುರದ ದುರ್ಗಾದೇವಿ ಜಾತ್ರೆ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನೋರ್ವ ಗಾಯಾಳುವನ್ನು ಬಾಗಲಕೋಟದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಶಾಸಕ ಗೋವಿಂದ ಕಾರಜೋಳ ಭೆಟ್ಟಿ ನೀಡಿದ್ದರು.

ಇನ್ನೊಂದು ಘಟನೆಯಲ್ಲಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕಿತ್ತೂರ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಲಾರಿಗೆ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದದ್ದರಿಂದ ಇಬ್ಬರು ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ.

ಮೃತರನ್ನು ರಾಜು ಒಡೆಯರ (31) ಹಾಗೂ ಪೂರ್ವಿಬಾಯಿ ನಾಯಕ (11) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕಿತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಲ್ಲಿ ಕಲ್ಲುಗಳನ್ನು ಹೇರಿಕೊಂಡು ಅತಿ ವೇಗದಿಂದ ಚಲಿಸುತ್ತಿದ್ದ ಟಿಪ್ಪರ್‌ವೊಂದು ಬೈನ್ಸಾ ಪಟ್ಟಣದ ಬಳಿ 18 ಜನರು ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ಆಟೋಗೆ ಡಿಕ್ಕಿ ಹೊಡೆಯಿತು. ಘಟನಾ ಸ್ಥಳದಲ್ಲಿ 14 ಜನ ಹಾಗೂ ಆಸ್ಪತ್ರೆಗೆ ಸೇರಿಸುವ ದಾರಿಯಲ್ಲಿ ಇನ್ನೊಬ್ಬ ವ್ಯಕ್ತಿ ಮೃತಪಟ್ಟರು.

ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ನೆರೆಯ ನಿಜಾಮಾಬಾದ್ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೇವಸ್ಥಾನಕ್ಕೆ ಹೋಗುವುದಕ್ಕಾಗಿ ಆಟೋರಿಕ್ಷಾವೊಂದನ್ನು ಬಾಡಿಗೆಗೆ ಪಡೆದು ತೆರಳುತ್ತಿದ್ದ ನತದೃಷ್ಟ ಪ್ರಯಾಣಿಕರು ಮಾರ್ಗ ಮಧ್ಯೆ ದುರಂತ ಸಾವಿಗೆ ಬಲಿಯಾದರು.

ಮೃತಪಟ್ಟವರ ಪೈಕಿ ಐವರು ಮಹಿಳೆಯರು, ನಾಲ್ಕು ಹುಡುಗರು ಹಾಗೂ ಮೂವರು ಬಾಲಕಿಯರು ಸೇರಿದ್ದಾರೆ ಎಂದು ಬೈನ್ಸಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌‌ಪೆಕ್ಟರ್ ವಿನೋದ್ ರೆಡ್ಡಿ ತಿಳಿಸಿದ್ದಾರೆ.

ದುರಂತಕ್ಕೀಡಾದ ಕುಟುಂಬವು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬೋಕಾರ್ ಮಂಡಲಕ್ಕೆ ಸೇರಿದ್ದು, ನಿಜಾಮಾಬಾದ್‌ನ ಇಟ್ಟಿಗೆ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮಣ್ಣು ಕುಸಿದು 7 ಸಾವು
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಸಮುಚ್ಛಯದಲ್ಲಿ ಮಣ್ಣು ಕುಸಿದು 7 ಜನ ಗಾರೆ ಕೆಲಸದ ಕಾರ್ಮಿಕರು ಸಾವಿಗೀಡಾಗಿದ್ದು, ಓರ್ವ ವ್ಯಕ್ತಿ ಅತ್ಯಾಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Write A Comment