ಕರ್ನಾಟಕ

ರಾಜ್ಯಸಭೆ ಮತ್ತು ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆಯಲ್ಲಿ ಕಾಂಗ್ರೆಸ್ ರಣತಂತ್ರ

Pinterest LinkedIn Tumblr

vidhana parishath

ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ವಿಧಾನ ಪರಿಷತ್‌ನ ನಾಲ್ಕೂ ಸ್ಥಾನಗಳನ್ನು ನಿರಾಯಾಸವಾಗಿ ತನ್ನದಾಗಿಸಿಕೊಳ್ಳಬಹುದು. ಅದೇ ರೀತಿ ರಾಜ್ಯಸಭೆಯ ಎರಡು ಸ್ಥಾನಗಳನ್ನೂ ಸುಲಭವಾಗಿ ಬಹುಮತ ಹೊಂದಿರುವ ಕಾಂಗ್ರೆಸ್ ಪಡೆಯಬಹುದು. ಆದರೆ, ವಿಧಾನಪರಿಷತ್‌ನ ಹೆಚ್ಚುವರಿ ಸ್ಥಾನವನ್ನು, ರಾಜ್ಯಸಭೆಯ ಇನ್ನೂ ಒಂದು ಸ್ಥಾನವನ್ನು ಪಡೆಯುವುದಕ್ಕಾಗಿ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬಲ ಕುಂದಿರುವುದರಿಂದ ಒಂದೊಂದು ಸ್ಥಾನವೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡು ಸ್ಥಾನಗಳ ಜತೆಗೆ ಮತ್ತೊಂದು ಸ್ಥಾನವನ್ನು ಆಯ್ಕೆ ಮಾಡಲು ಕಸರತ್ತು ಆರಂಭಿಸಿದೆ. ಹಾಲಿ ಇರುವ ಸದಸ್ಯ ಬಲದ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಇಬ್ಬರನ್ನು ಆಯ್ಕೆ ಮಾಡಬಹುದಾಗಿದೆ. ಮತ್ತೊಬ್ಬರನ್ನು ಆಯ್ಕೆ ಮಾಡಲು ತೀವ್ರ ಕಸರತ್ತು ಮಾಡಬೇಕು, ತುಂಬಾ ರಿಸ್ಕ್ ತೆಗೆದುಕೊಳ್ಳಬೇಕು. ಮೂರನೆ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ತೊಡಗಿದ್ದು, ಪ್ರಬಲ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಅಭ್ಯರ್ಥಿಗೆ ಗಾಳ ಹಾಕಿದೆ.

ಈ ಮೂಲಕ ಜೆಡಿಎಸ್‌ಗೆ ಟಾಂಗ್ ಕೊಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಪ್ರತಿ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಯಶಸ್ಸು ಸಾಧಿಸುತ್ತಿತ್ತು. ಈಗ ಅದೇ ತಂತ್ರ ರೂಪಿಸಿ ತಿರುಗೇಟು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ. ಈ ಸಂಬಂಧ ಇದೇ 20ರ ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯನವರು ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭೆಗೆ ಹಿರಿಯ ಮುಖಂಡರಾದ ಆಸ್ಕರ್ ಫರ್ನಾಂಡಿಸ್ ಹಾಗೂ ಕೆ.ಬಿ.ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರು ಕೂಡ ಪ್ರಬಲವಾಗಿ ಕೇಳಿಬಂದಿದೆ. ಚುನಾವಣೆ ಸಂದರ್ಭದಲ್ಲಿ ಯಾವ ರೀತಿಯ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಇನ್ನು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಏಳು ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಜೂನ್ 10ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ಎದುರಾಗಿದೆ.

ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ವಿಧಾನ ಪರಿಷತ್‌ಗೆ ನಾಲ್ವರನ್ನು ಸಲೀಸಾಗಿ ಆಯ್ಕೆ ಮಾಡಬಹುದಾಗಿದೆ. ಸುಮಾರು 50ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಇದಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಮಾಜಿ ಮೇಯರ್ ರಾಮಚಂದ್ರಪ್ಪ, ಛಲವಾದಿ ನಾರಾಯಣಸ್ವಾಮಿ, ಪ್ರೊ.ಬಿ.ಕೆ.ಚಂದ್ರಶೇಖರ್, ಮಲ್ಲಾಜಮ್ಮ, ಕೆ.ಪಿ.ನಂಜುಂಡಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮದ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಎಂ.ಎಸ್.ಬಸವರಾಜ್, ಎಸ್.ಎಂ.ಆನಂದ್, ಮಾಜಿ ಸಂಸದ ಮಂಜುನಾಥ್ ಕುನ್ನೂರ್, ಮಳವಳ್ಳಿ ಶಿವಣ್ಣ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದಾರೆ.

ಮೂರು ಸ್ಥಾನಗಳನ್ನು ಆಯ್ಕೆ ಮಾಡಲಿರುವ ಕಾಂಗ್ರೆಸ್ ನಾಲ್ಕನೆ ಸ್ಥಾನವನ್ನು ಕೂಡ ತನ್ನದಾಗಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಮೂವರನ್ನು ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಬಹುದಾಗಿದೆ. ಇದಕ್ಕಾಗಿ ರಮ್ಯಾ, ಭಾವನಾ, ಬರಗೂರು ರಾಮಚಂದ್ರಪ್ಪ, ಕೆ.ಬಿ.ಸಿದ್ದಯ್ಯ, ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಜಿ.ಕೆ.ಗೋವಿಂದರಾವ್ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿವೆ. ಒಟ್ಟಾರೆ ಮೇಲ್ಮನೆ ಹಾಗೂ ರಾಜ್ಯಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಹೆಚ್ಚಿನ ಸ್ಥಾನ ಗೆಲ್ಲಲು ರಾಜಕೀಯ ಪಕ್ಷಗಳು ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಬಲ ವೃದ್ಧಿಯಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಭಾವ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

Write A Comment