ಕರ್ನಾಟಕ

ಮುಂದಿನ ಚುನಾವಣೆಯಲ್ಲಿ ಜನಬಲ, ದೈವಬಲದಿಂದ ಬಿಜೆಪಿ ಅಧಿಕಾರಕ್ಕೆ : ಯಡಿಯೂರಪ್ಪ ಭವಿಷ್ಯ

Pinterest LinkedIn Tumblr

yad

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಜನಬಲ, ದೈವಬಲದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು. ರವೀಂದ್ರಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬಸವಜಯಂತಿ ಆಚರಣೆ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ನಾವು 150 ಸ್ಥಾನವನ್ನು ಗೆಲ್ಲುತ್ತೇವೆ. ಕೇವಲ ಕಾಂಗ್ರೆಸ್‌ನ ದುರಾಡಳಿತದಿಂದಷ್ಟೇ ಅಲ್ಲ ನಮ್ಮ ಸಾಧನೆಯನ್ನೂ ಗಮನಿಸಿ ರಾಜ್ಯದ ಜನ ಕೈಹಿಡಿಯುತ್ತಾರೆ ಎಂದು ಹೇಳಿದರು.

ಬಿಜೆಪಿಗೆ ಬಹುಮತ ಬರುವುದರಲ್ಲಿ ಯಾರಿಗೂ ಸಂಶಯ ಬೇಡ ಎಂದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಮುಖಂಡರಲ್ಲಿ ಭಿನ್ನಾಭಿಪ್ರಾಯವೂ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ಯಾರೋ ಕೆಲವರು ನಮ್ಮ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿರುವುದರಲ್ಲಿ ಯಾವುದೇ ಹುರುಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿ ನಮ್ಮ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿರಬಹುದೆಂದು ತಿರುಗೇಟು ನೀಡಿದರು. ಕಾಂಗ್ರೆಸ್ ಸರ್ಕಾರ ತನ್ನ ಮೂರು ವರ್ಷದ ಸಾಧನೆಯ ಪುಸ್ತಕವನ್ನು ಹೊರ ತಂದಿದೆ. ನಾನು ಆ ಪುಸ್ತಕವನ್ನು ಇನ್ನೂ ಓದಿಲ್ಲ. ನಾವೂ ಕೂಡ ನಮ್ಮ ಸಾಧನೆಯ ಪುಸ್ತಕವನ್ನು ತರುತ್ತೇವೆ ಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರರು, ಯಾವುದೇ ಜಾತಿ, ಧರ್ಮಕ್ಕೆ ಅವರು ಸೀಮಿತವಾಗಿಲ್ಲ. ಕಾಯಕ ಮಂತ್ರವನ್ನು ಜನರಿಗೆ ನೀಡಿದ್ದರು. ಇಷ್ಟಕ್ಕೆ ಸೀಮಿತವಾಗದೆ ಸಂಸ್ಕಾರವನ್ನೂ ನೀಡಿದ್ದಾರೆ ಎಂದು ಗುಣಗಾನ ಮಾಡಿದರು. ಮಾಹಿತಿ ತಂತ್ರಜ್ಞಾನ ಮತ್ತು ಯೋಜನಾ ಸಚಿವ ಎಸ್.ಆರ್.ಪಾಟೀಲ್ ಮಾತನಾಡಿ, ಬಸವಣ್ಣ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು. ಬಸವ ವೇದಿಕೆ ಕೇವಲ ಪ್ರಶಸ್ತಿ ನೀಡಲು ಸೀಮಿತವಾಗದೆ ಬಸವಣ್ಣನವರ ವಿಚಾರಧಾರೆಗಳನ್ನು ಪ್ರಚಾರ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಹಿರಿಯ ಸಾಹಿತಿ ನಾಡೋಜ ಹಂಪನಾಗರಾಜಯ್ಯ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಎಲ್ಲಿಯವರೆಗೆ ಜೀವಂತವಾಗಿರುತ್ತದೋ ಅಲ್ಲಿಯವರೆಗೆ ವಚನ ಸಾಹಿತ್ಯ ನಿಲ್ಲುತ್ತದೆ ಎಂದರು.

ಶ್ರೀ ಸುತ್ತೂರು ಮಠಾಧೀಶ್ವರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, 9 ಶತಮಾನಗಳ ಹಿಂದೆ ಜಗತ್ತು ಕಂಡು ಕೇಳರಿಯದ ಕ್ರಾಂತಿಗೆ ಬಸವಣ್ಣ ಕಾರಣರಾದರು. ಸಮಾಜದಲ್ಲಿ ಬೇರು ಬಿಟ್ಟಿದ್ದ ಅಸಮಾನತೆ ವಿರುದ್ಧ ಧ್ವನಿ ಎತ್ತಿದ ಅಪರೂಪದ ಮಹಾನ್‌ಪುರುಷ ಎಂದು ಹೇಳಿದರು. ಬಸಣ್ಣನವರು ಎಲ್ಲ ಜನರಿಗೂ ದಾರಿ ದೀಪವಾಗಿದ್ದಾರೆ. ಬಸವಣ್ಣನಿಗಾಗಿ ಜಯಂತಿ ಆಚರಿಸಬೇಕಿಲ್ಲ. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಜಯಂತಿ ಆಚರಣೆ ಮಾಡಬೇಕು ಎಂದು ತಿಳಿಸಿದರು.

ಉದ್ಯಮಿ ವಿಜಯಸಂಕೇಶ್ವರ್ ಅವರಲ್ಲಿ ಶಿಸ್ತಿದೆ. ಹಾಗಾಗಿ ಅವರ ಉದ್ಯಮ ಚೆನ್ನಾಗಿ ನಡೆಯುತ್ತಿದೆ. ಅವರು ಸಾವಿರಾರು ಮಂದಿಗೆ ಉದ್ಯೋಗ ದಾತರಾಗಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿ ಡಾ.ವಿಜಯಸಂಕೇಶ್ವರ್ ಅವರಿಗೆ ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿಗಳು ಹಾಗೂ ಪ್ರಾಧ್ಯಾಪಕರಾದ ಪ್ರೊ.ಜಿ.ಎಚ್.ಹನ್ನೆರಡು ಮಠ ಮತ್ತು ಡಾ.ಮಂಗಳಾ ಪ್ರಿಯದರ್ಶಿನಿ ಅವರಿಗೆ ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಶಿವಮೊಗ್ಗ ಬೆಕ್ಕಿನ ಕಲ್ಮಠ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Write A Comment