ಕರ್ನಾಟಕ

ನೆಗೆಟಿವ್ ವೋಟ್‌ನಿಂದ ಗೆಲ್ಲಬೇಕಾಗಿಲ್ಲ: ಯಡಿಯೂರಪ್ಪ

Pinterest LinkedIn Tumblr

BSYಹೊನ್ನಾಳಿ( ದಾವಣಗೆರೆ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೌರ್ಬಲ್ಯ ಹಾಗೂ ಕಾಂಗ್ರೆಸ್ ಸರ್ಕಾರದ ನೆಗೆಟಿವ್ ವೋಟ್‌ಗಳಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಮಗೆ ಬೇಕಾಗಿಲ್ಲ. ಕೇಂದ್ರ ಸರ್ಕಾರದ ಸಾಧನೆ ಮತ್ತು ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಐದು ವರ್ಷ ನಡೆಸಿದ ಸುವರ್ಣ ಆಡಳಿತದ ಬಲದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಹೊನ್ನಾಳಿಯ ಬಿಜೆಪಿ ಘಟಕ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರಿಗೆ ಬಹುಮತ ಇದೆ. ಇನ್ನು ಎರಡು ವರ್ಷ ಆಡಳಿತ ನಡೆಸಲು ನಮ್ಮ ಅಭ್ಯಂತರ ಇಲ್ಲ. ನಾವು ಸಕಾರಾತ್ಮಕ ಮತಗಳಿಂದ ಮುಂದೆ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಹಿಂದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರದ ಶಾಸಕರೇ ಅಲ್ಪ ಸಂಖ್ಯಾತರಿಗೆ ಸೇರಿದ 13 ಕೋಟಿ ರೂಪಾಯಿ ಮೌಲ್ಯದ ವಕ್ಫ್ ಆಸ್ತಿ ಲೂಟಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯ ಸರ್ಕಾರದ ಸಚಿವರ ಹಾಗೂ ಶಾಸಕರ ಭ್ರಷ್ಟಾಚಾರದ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಅವರು ಕಾರ್ಯಕ್ರಮದ ಬಳಿಕ ‌‌ಸುದ್ದಿಗಾರರಿಗೆ ತಿಳಿಸಿದರು.

Write A Comment