ಬೆಳಗಾವಿ/ತುಮಕೂರು: ತುಮಕೂರು ಜಿಪಂ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯವಾಗಿದ್ದರೆ, ಬೆಳಗಾವಿ ಜಿಪಂನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಒಟ್ಟು 57 ಸದಸ್ಯ ಬಲದ ತುಮಕೂರು ಜಿಪಂನಲ್ಲಿ ಕಾಂಗ್ರೆಸ್ 23, ಬಿಜೆಪಿ 19, ಜೆಡಿಎಸ್ 14 ಸ್ಥಾನಗಳನ್ನು ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್ನ್ನು ಅಧಿಕಾರದಿಂದ ದೂರವಿಡಬೇಕೆಂದು ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್ನ ಲತಾ ರವಿಕುಮಾರ್ ಅಧ್ಯಕ್ಷರಾಗಿ, ಬಿಜೆಪಿಯ ಶಾರದಾ ನರಸಿಂಹಮೂರ್ತಿ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಬೆಳಗಾವಿ ಜಿಪಂ: 90 ಸದಸ್ಯರ ಬಲ ಹೊಂದಿರುವ ಬೆಳಗಾವಿ ಜಿಪಂನಲ್ಲಿ 43 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಬಿಜೆಪಿ 39, ಜೆಡಿಎಸ್ 2 ಹಾಗೂ ಸ್ವತಂತ್ರ 6 ಜನ ಗೆದ್ದಿದ್ದಾರೆ. ಕಾಂಗ್ರೆಸ್ಗೆ ಅಧಿಕಾರ ಪಡೆಯಲು 3 ಸ್ಥಾನಗಳ ಕೊರತೆಯಿತ್ತು. ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ನ ಇಬ್ಬರು ಹಾಗೂ ಒಬ್ಬ ಪಕ್ಷೇತರ ಸದಸ್ಯನ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು. ಕಾಂಗ್ರೆಸ್ನ ಆಶಾ ಐಹೊಳೆ ಅಧ್ಯಕ್ಷೆಯಾಗಿ ಹಾಗೂ ಅರುಣ ಕಟಾಂಬಳೆ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ.
-ಉದಯವಾಣಿ