ರಾಷ್ಟ್ರೀಯ

ಇತಿಹಾಸ ಸೃಷ್ಟಿಸಿದ ಉತ್ತರಾಖಂಡ

Pinterest LinkedIn Tumblr

12-ANKANA-3ಕೇಂದ್ರ ಸರಕಾರವು ರಾಜ್ಯಗಳ ಸಮನ್ವಯಕಾರನಾಗಿ ದೇಶದ ಸಮಗ್ರ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸಲು ಅವಕಾಶವಿಲ್ಲ. ಇದನ್ನು ಉತ್ತರಾಖಂಡದ ಮೂಲಕ ಸುಪ್ರೀಂಕೋರ್ಟ್‌ ಮತ್ತೂಮ್ಮೆ ಕಿವಿ ಹಿಂಡಿ ಹೇಳಿದೆ.

ರಾಜ್ಯಗಳಲ್ಲಿ ಉಂಟಾಗುವ ಸಣ್ಣಪುಟ್ಟ ರಾಜಕೀಯ ಬಿಕ್ಕಟ್ಟುಗಳನ್ನೇ ನೆಪವಾಗಿಟ್ಟುಕೊಂಡು ಸಂವಿಧಾನದ 356ನೇ ವಿಧಿಯ ಮೂಲಕ ರಾಷ್ಟ್ರಪತಿ ಆಳ್ವಿಕೆ ಹೇರಿ ಆಡಳಿತವನ್ನು ಕೈವಶ ಮಾಡಿಕೊಳ್ಳುವ ಕೇಂದ್ರ ಸರ್ಕಾರಗಳ ಅತ್ಯುತ್ಸಾಹಕ್ಕೆ ಉತ್ತರಾಖಂಡದಲ್ಲಿ ಹರೀಶ್‌ ರಾವತ್‌ ಅವರ ಸರಕಾರ ಮರುಸ್ಥಾಪನೆಯಾದ ರೀತಿ ಅತಿದೊಡ್ಡ ಐತಿಹಾಸಿಕ ಪಾಠ. ರಾಷ್ಟ್ರಪತಿ ಆಳ್ವಿಕೆಯ ವಿರುದ್ಧ ಉತ್ತರಾಖಂಡ ನಡೆಸಿದ ಕಾನೂನು ಹೋರಾಟ ಕೂಡ ಈ ವಿಷಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ, ಇನ್ನುಮುಂದೆ ಯಾವುದೇ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವಾಗ ಕೇಂದ್ರ ಸರ್ಕಾರಗಳು ಸರ್ವಾಧಿಕಾರಿತನದ ಧೋರಣೆ ಪ್ರದರ್ಶಿಸದೆ ತಮ್ಮ ಕ್ರಮ ನ್ಯಾಯಾಂಗದ ಪರಾಮರ್ಶೆಗೆ ಒಳಗಾಗಬಹುದು ಮತ್ತು ನ್ಯಾಯಾಂಗವು ಪ್ರಜಾಪ್ರಭುತ್ವದ ಪರ ನಿಲ್ಲುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಯೋಚಿಸಿ ನಿರ್ಧಾರ ಕೈಗೊಳ್ಳುವಂತೆ ಮಾಡಿದೆ.

ರಾಜ್ಯ ಸರಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎಂಬುದನ್ನು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಸುವ ಮೂಲಕವೇ ನಿಗದಿಪಡಿಸಬೇಕು ಎಂದು ಈ ಹಿಂದೆಯೇ ಕರ್ನಾಟಕದಲ್ಲಿ ಎಸ್‌.ಆರ್‌. ಬೊಮ್ಮಾಯಿಯವರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಅದೂ ಕೂಡ ಇತಿಹಾಸ ಸೃಷ್ಟಿಸಿತ್ತು. ಎರಡು ತಿಂಗಳ ಹಿಂದೆ ಉತ್ತರಾಖಂಡದಲ್ಲಿ ಪರಿಸ್ಥಿತಿ ಕೊಂಚ ಬೇರೆ ರೀತಿ ಇದ್ದುದರ ಲಾಭ ಪಡೆಯಲು ಕೇಂದ್ರ ಸರಕಾರವು ವಿಶ್ವಾಸಮತ ಯಾಚನೆಗೆ ಅವಕಾಶ ನೀಡದೆ ವಿಶ್ವಾಸಮತ ಯಾಚನೆಗೆ ನಿಗದಿಯಾಗಿದ್ದ ದಿನದ ಹಿಂದಿನ ದಿನ ತರಾತುರಿಯಲ್ಲಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಆ ನಿರ್ಧಾರವನ್ನು ಹರೀಶ್‌ ರಾವತ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ರಾಷ್ಟ್ರಪತಿ ಆಳ್ವಿಕೆಯೂ ನ್ಯಾಯಾಂಗದ ವಿಮರ್ಶೆಗೆ ಒಳಪಡಬಹುದು ಎಂಬ ಮಹತ್ವದ ಆದೇಶ ಬಂದಿತ್ತು. ಅದನ್ನು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಅಲ್ಲೂ ಕೇಂದ್ರಕ್ಕೆ ಹಿನ್ನಡೆಯಾಗಿ, ಸುಪ್ರೀಂಕೋರ್ಟ್‌ ಹರೀಶ್‌ ರಾವತ್‌ಗೆ ತನ್ನ ಸುಪರ್ದಿಯಲ್ಲಿ ಉತ್ತರಾಖಂಡದ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲು 1 ತಾಸಿನ ಮಟ್ಟಿಗೆ ಅವಕಾಶ ನೀಡಿತ್ತು. ವಿಧಾನಸಭೆಯಲ್ಲಿ ಯಾವುದೇ ಕಲಾಪವನ್ನು ನಡೆಸುವ ಜವಾಬ್ದಾರಿ ಸ್ಪೀಕರ್‌ ಅವರದ್ದಾದರೂ ಸುಪ್ರೀಂಕೋರ್ಟ್‌ ತನ್ನದೇ ಮೇಲ್ವಿಚಾರಣೆಯಲ್ಲಿ, ಸ್ಪೀಕರ್‌ ಇಲ್ಲದೆ, ವಿಶ್ವಾಸಮತ ಯಾಚನೆ ಮಾಡಿಸಿದ್ದು ಈ ದೇಶದಲ್ಲಿ ಇದೇ ಮೊದಲು. 9 ಮಂದಿ ಬಂಡಾಯ ಶಾಸಕರು ವಜಾಗೊಂಡಿದ್ದರಿಂದ ಸದನದ ಒಟ್ಟಾರೆ ಬಲವೇ ಕುಸಿದು, ಇತರ ಕೆಲ ಪಕ್ಷಗಳಿಂದ ಬಾಹ್ಯ ಬೆಂಬಲ ಗಿಟ್ಟಿಸಿಕೊಂಡು, ಹರೀಶ್‌ ರಾವತ್‌ ಮತ್ತೆ ಈಗ ಮುಖ್ಯಮಂತ್ರಿಯಾಗಿದ್ದಾರೆ. ಒಟ್ಟಾರೆ ವಿದ್ಯಮಾನ ಸ್ಪಷ್ಟವಾಗಿ ಕೇಂದ್ರ ಸರಕಾರಕ್ಕೆ ಆದ ಹಿನ್ನಡೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಉತ್ತರಾಖಂಡದಲ್ಲಿ ಕೇಂದ್ರದ ಎನ್‌ಡಿಎ ಸರಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತ್ತು, ಅದನ್ನೀಗ ಸುಪ್ರೀಂಕೋರ್ಟ್‌ ಸರಿಪಡಿಸಿದೆ ಎಂದು ಕಾಂಗ್ರೆಸ್‌ ಪಕ್ಷ ಜೋರು ದನಿಯಲ್ಲಿ ಹೇಳುತ್ತಿದೆ. ಆದರೆ, ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರಕಾರಗಳ ಇತಿಹಾಸ ಸ್ವತ್ಛವಾಗೇನೂ ಇಲ್ಲ. ಕೇಂದ್ರದಲ್ಲಿ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳೂ ಅವಕಾಶ ಸಿಕ್ಕಾಗ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವ ಧಾಷ್ಟéìವನ್ನು ಸಮಾನವಾಗಿ ಪ್ರದರ್ಶಿಸಿವೆ. ಆದರೆ, ಈಗ ರಾಷ್ಟ್ರಪತಿ ಆಳ್ವಿಕೆ ಹೇರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಕೊಂಚ ಕಠಿನವಾಗಿ ವರ್ತಿಸಿ ಪ್ರಜಾಪ್ರಭುತ್ವವನ್ನೂ ರಾಜ್ಯಗಳ ಸ್ವಾತಂತ್ರ್ಯವನ್ನೂ ಎತ್ತಿ ಹಿಡಿಯುತ್ತಿರುವುದರಿಂದ ಹಂತ ಹಂತವಾಗಿ ಇನ್ನುಮುಂದೆ ಈ ವಿಷಯದಲ್ಲಿ ಕೇಂದ್ರ ಸರಕಾರಗಳ ಸರ್ವಾಧಿಕಾರಿತನ ಬಿಸುಪು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ಉತ್ತರಾಖಂಡ ತನ್ನದೇ ಕೊಡುಗೆ ನೀಡಿದಂತಾಗಿದೆ.

ಒಕ್ಕೂಟ ಮಾದರಿಯ ಪ್ರಜಾಪ್ರಭುತ್ವದಲ್ಲಿ ಕೇಂದ್ರ ಸರಕಾರ ದೊಡ್ಡದಲ್ಲ, ರಾಜ್ಯ ಸರಕಾರ ಸಣ್ಣದಲ್ಲ. ಇವೆರಡೂ ಒಂದಕ್ಕೊಂದು ಪೂರಕವಾದ ಎರಡು ಪ್ರತ್ಯೇಕ ವ್ಯವಸ್ಥೆಗಳು. ಕೇಂದ್ರ ಸರಕಾರ ಇಲ್ಲಿ ರಾಜ್ಯಗಳ ಸಮನ್ವಯಕಾರನಾಗಿ ಒಟ್ಟಾರೆ ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸಲು ಅವಕಾಶವಿಲ್ಲ. ಇದನ್ನು ಉತ್ತರಾಖಂಡದ ಮೂಲಕ ಸುಪ್ರೀಂಕೋರ್ಟ್‌ ಮತ್ತೂಮ್ಮೆ ಕಿವಿ ಹಿಂಡಿ ಹೇಳಿದೆ.
-ಉದಯವಾಣಿ

Write A Comment