ಕರ್ನಾಟಕ

ಪಾಲಿಕೆಯಲ್ಲಿ ಬೀಡುಬಿಟ್ಟಿದ ಅಧಿಕಾರಿಗಳ ಎತ್ತಂಗಡಿ

Pinterest LinkedIn Tumblr

bbmp_logoಬೆಂಗಳೂರು, ಮೇ ೧೨- ಪಾಲಿಕೆಯಲ್ಲಿ ಎರವಲು ಸೇವೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಮೂವರು ಅಧಿಕಾರಿಗಳನ್ನು ಮಾತೃ ಇಲಾಖೆಯಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಾಪಸ್ ಕಳುಹಿಸಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಪೂಣಚ್ಚ, ಶ್ರೀನಿವಾಸ ಮೂರ್ತಿ ಮತ್ತು ವಿಶ್ವನಾಥ್ ಅವರನ್ನು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಕಳುಹಿಸಲಾಗಿದೆ.
ಈ ಮೂವರು ಅಧಿಕಾರಿಗಳ ಎರವಲು ಸೇವೆ ಮುಗಿದಿದ್ದರೂ, ಪಾಲಿಕೆಯಲ್ಲಿಯೇ 8 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಮಾತೃ ಇಲಾಖೆಗೆ ಇಲ್ಲವಾದಲ್ಲಿ ಪಾಲಿಕೆಯ ಮೂಲ ಅಧಿಕಾರಿಗಳು ಮತ್ತು ನೌಕರರ ಮುಂಬಡ್ತಿಗೆ ಪೆಟ್ಟು ಬಿದ್ದಂತಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಕಾರ್ಯದರ್ಶಿ ಹಾಗೂ ಖಜಾಂಚಿ ರುದ್ರೇಶ್ ಅವರು ಆಗ್ರಹಪಡಿಸಿದ್ದರು.
ನಗರಾಭಿವೃದ್ಧಿ ಇಲಾಖೆಯ ವಿವಿಧ ಇಲಾಖೆಗಳಿಂದ ಎರವಲು ಸೇವೆ ಬಂದವರು ಕನಿಷ್ಟ ಮೂರು ವರ್ಷಗಳವರೆಗೆ ಸೇವೆ ಸಲ್ಲಿಸಬಹುದು. ಅಂತಹ ಅಧಿಕಾರಿಗಳು ಮತ್ತು ನೌಕರರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಪಾಲಿಕೆಯ ಆಯುಕ್ತರಿಗೆ ಸಂಪೂರ್ಣ ಅಧಿಕಾರ ಇದೆ ಎಂದು ಅವರು ಮೇಯರ್ ಮಂಜುನಾಥ ರೆಡ್ಡಿ ಹಾಗೂ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರಿಗೆ ಪತ್ರ ಬರೆದಿದ್ದರು.
ಪಾಲಿಕೆಯ ಹಿಂದಿನ ಆಯುಕ್ತ ಕುಮಾರ್ ನಾಯಕ್ ಅವರೂ ಕೂಡ ಈ ಅಧಿಕಾರಿಗಳನ್ನು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಕಳುಹಿಸುವಂತೆ ಆದೇಶ ಹೊರಡಿಸಿದ್ದರು.
ಆದರೆ ನೂತನವಾಗಿ ಬಂದ ಆಯುಕ್ತ ಮಂಜುನಾಥ ಪ್ರಸಾದ್ ಅವರಿಗೆ ಈ ಅಂಶಗಳನ್ನು ಮುಚ್ಚಿಟ್ಟು ಪಾಲಿಕೆಯ ಸೇವೆಯಲ್ಲಿಯೇ ಮುಂದುವರೆಸುವಂತೆ ತಿದ್ದುಪಡಿ ಕಚೇರಿ ಆದೇಶ ಹೊರಡಿಸಲಾಗಿತ್ತು ಎಂದು ರುದ್ರೇಶ್ ಅವರು ಅಸಮಾಧಾನ ವ್ಯಕ್ತಪಡಿಸಿ, ಈ ನೌಕರರನ್ನು ಪಾಲಿಕೆಯ ಸೇವೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು.
ನಂತರ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಆದೇಶ ಹೊರಡಿಸಿ, ಈ ಮೂವರು ಅಧಿಕಾರಿಗಳನ್ನು ಮಾತೃ ಇಲಾಖೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಾಪಸ್ ಕಳುಹಿಸುವ ಸಂಬಂಧ ಆದೇಶ ಹೊರಡಿಸಿದ್ದಾರೆ.

Write A Comment