ಕರ್ನಾಟಕ

ಬೇಕಾಬಿಟ್ಟಿ ಮಾತಾಡದೆ ದಾಖಲೆ ಸಮೇತ ಚರ್ಚೆಗೆ ಬನ್ನಿ

Pinterest LinkedIn Tumblr

Krishna-Byre-Gowda-600ಬೆಂಗಳೂರು: ಬರ ನಿರ್ವಹಣೆ ವಿಚಾರದಲ್ಲಿ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಅಂಕಿ-ಅಂಶಗಳ ಆಧಾರದ ಮೇಲೆ ಚರ್ಚೆಗೆ ಬರಲಿ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಣ ವೆಚ್ಚ ಮಾಡಿಲ್ಲ ಎಂದು ಬಿಜೆಪಿ ನಾಯಕರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಪಾರದರ್ಶಕ ವ್ಯವಸ್ಥೆಯಡಿ ಬೆಳೆನಷ್ಟಕ್ಕೊಳಗಾದ ರೈತನ ಬ್ಯಾಂಕ್‌ ಖಾತೆಗೆ 1450 ಕೋಟಿ ರೂ. ಪರಿಹಾರ ಜಮೆ ಮಾಡಿದ ಕೀರ್ತಿ ನಮ್ಮ ಸರ್ಕಾರದ್ದು ಎಂದು ತಿರುಗೇಟು ನೀಡಿದರು.

ಕೇಂದ್ರ ಸರ್ಕಾರಕ್ಕೆ ನಾವು ಮುಂಗಾರು ಹಂಗಾಮಿನ ನಷ್ಟಕ್ಕೆ ಕೇಳಿದ ಪರಿಹಾರ 3840 ಕೋಟಿ ರೂ. ಆಗಿತ್ತು. ನಮಗೆ ಕೊಟ್ಟಿದ್ದು 1540 ಕೋಟಿ ರೂ. ಮಾತ್ರ. ಆದರೆ, ನಮಗಿಂತ ತಡವಾಗಿ ಪ್ರಸ್ತಾವನೆ ಸಲ್ಲಿಸಿದ ಮಹಾರಾಷ್ಟ್ರಕ್ಕೆ 3000 ಕೋಟಿ ರೂ. ಹಾಗೂ ಮಧ್ಯಪ್ರದೇಶಕ್ಕೆ 2000 ಕೋಟಿ ರೂ. ಹಣ ಬಿಡುಗಡೆ ಮಾಡಲಾಯಿತು. ಇದು ಯಾವ ನ್ಯಾಯ? ರಾಜ್ಯದ ರೈತರ ಪರ ಬಿಜೆಪಿ ನಾಯಕರು ಇದ್ದಿದ್ದರೆ ಹೆಚ್ಚಿನ ಹಣ ಕೊಡಿಸುವ ಮೂಲಕ ಬದ್ಧತೆ ತೋರಬೇಕಿತ್ತು ಎಂದರು.

ಬಿಜೆಪಿ ಆಡಳಿತದ ಐದು ವರ್ಷಗಳಲ್ಲಿ ಕೃಷಿ ಸಚಿವರಾಗಿದ್ದ ರವೀಂದ್ರನಾಥ್‌ ಅವರು 51 ಬಾರಿ, ಉಮೇಶ್‌ಕತ್ತಿ ಅವರು 29 ಬಾರಿ ಪ್ರವಾಸ ಮಾಡಿದ್ದರು. ಅದೂ ಅವರ ಕ್ಷೇತ್ರದಿಂದ ಬೆಂಗಳೂರಿಗೆ ಬರುವಾಗ-ಹೋಗುವಾಗ ಮಾಡಿದ್ದ ಪ್ರವಾಸಗಳು. ಆದರೆ, ನಾನು ಮೂರು ವರ್ಷದಲ್ಲಿ 171 ಬಾರಿ ಪ್ರವಾಸ ಮಾಡಿದ್ದೇನೆ. ನನಗೆ ಬಿಜೆಪಿಯವರಂತೆ ಬೇರೆ ಹವ್ಯಾಸಗಳೇನೂ ಇಲ್ಲ. ಶೇ.99.99ರಷ್ಟು ರೈತರ ಹೊಲಗಳಿಗೆ ಭೇಟಿ ನೀಡಿದ್ದೇನೆ. ಇದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು.

2012-13ರಲ್ಲಿ ಬಿಜೆಪಿ ಆಡಳಿತ ಇದ್ದಾಗ ರಾಜ್ಯದಲ್ಲಿ 152 ತಾಲೂಕುಗಳ ಬರಪೀಡಿತ ಆಗಿದ್ದವು. ಆಗ ಕೇಂದ್ರ ಸರ್ಕಾರ 397 ಕೋಟಿ ರೂ. ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಿದರೆ ಇವರು ಎರಡೂವರೆ ತಿಂಗಳ ನಂತರ ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆ ಮಾಡಿದ್ದರು. ಅದೇ ರೀತಿ 2011-12ರಲ್ಲಿ ಕೇಂದ್ರ ಸರ್ಕಾರ ಕೊಟ್ಟಿದ್ದ 293 ಕೋಟಿ ರೂ.ಗಳನ್ನು ಆರು ತಿಂಗಳು ಬಿಟ್ಟು ವರ್ಗಾವಣೆ ಮಾಡಿದ್ದರು.

ಕೇಂದ್ರ ಸರ್ಕಾರ ಕೊಟ್ಟ ಹಣಕ್ಕೆ ರಾಜ್ಯದಿಂದ ಒಂದು ನಯಾ ಪೈಸೆ ಸೇರಿಸಿರಲಿಲ್ಲ. ಆದರೆ, ನಾವು ಕೇಂದ್ರ ಕೊಟ್ಟ 1752 ಕೋಟಿ ರೂ. ಜತೆಗೆ 230 ಕೋಟಿ ರೂ. ಸೇರಿಸಿ 2086 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಬಿಜೆಪಿಯವರ ಬಂಡವಾಳ ಏನು ಎಂಬುದು ನಮಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಹಂಗಾಮಿನ ನಷ್ಟದ ಬಾಬ್ತು 1417 ಕೋಟಿ ರೂ. ನೀಡುವಂತೆ ಜನವರಿಯಲ್ಲೇ ಮನವಿ ಮಾಡಿದ್ದರೂ ಇತ್ತೀಚೆಗೆ 725 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಇದುವರೆಗೂ ಹಣ ತಲುಪಿಲ್ಲ. ರಾಜ್ಯದಲ್ಲಿ ಇಷ್ಟು ಬರ ಪರಿಸ್ಥಿತಿ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಬರಲಿಲ್ಲ? ವಿದೇಶ ಪ್ರವಾಸದಲ್ಲಿ ನಿರತರಾಗಿರುವ ಅವರಿಗೆ ಪುರುಸೊತ್ತು ಇಲ್ಲವೇ? ಬರದಿದ್ದರೆ ಹೋಗಲಿ, ನೆರವು ಹೆಚ್ಚಾಗಿ ಕೊಡಲು ಯಾಕೆ ಮುಂದಾಗಲಿಲ್ಲ? ಬಿಜೆಪಿ ನಾಯಕರಿಗೆ ಇದರ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ತಡೆಯುವ ಹಾಗೂ ಬರ ವಿಚಾರದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಬಿಜೆಪಿ ಇಲ್ಲೂ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

&ಉದಯವಾಣಿ

Write A Comment