ಹುಮನಾಬಾದ್ : ಎಚ್5 ಎನ್1 (ಹಕ್ಕಿಜ್ವರ) ವೈರಸ್ ಪತ್ತೆಯಾದ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮೊಳಕೇರಾ ಸಮೀಪದ ಕೋಳಿಫಾರ್ಮ್ ನಲ್ಲಿ ಬುಧವಾರ ಸಂಜೆವರೆಗೆ ಅಂದಾಜು 80 ಸಾವಿರ ಕೋಳಿ ನಾಶಪಡಿಸಲಾಗಿದೆ. ಗುರುವಾರವೂ ಕೋಳಿ ನಾಶಪಡಿಸುವ ಕಾರ್ಯಾಚರಣೆ ಮುಂದುವರಿಯಲಿದೆ. ಈ ನಡುವೆ ಕೋಳಿ ನಾಶಪಡಿಸುತ್ತಿರುವವರು ಕಾರ್ಯಾಚರಣೆ ಮುಗಿದ ಅನಂತರ 10 ದಿನಗಳ ಕಾಲ ಮನೆಗಳಿಗೆ ತೆರಳುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಮೊಳಕೇರಾ ಸಮೀಪದ ಕೋಳಿಫಾರ್ಮ್ ನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ 1.30 ಲಕ್ಷ ಕೋಳಿ ನಾಶಪಡಿಸಲು ಸೂಚಿಸಲಾಗಿತ್ತು. ಮಂಗಳವಾರ ಸಂಜೆಯಿಂದ ಕೋಳಿಗಳನ್ನು ಕತ್ತು ಮುರಿದು ಕೊಂದು ಹೂಳಲಾಗುತ್ತಿದೆ. ಬುಧವಾರ ಸಂಜೆವರೆಗೆ 80 ಸಾವಿರ ಕೋಳಿಗಳನ್ನು ಕೊಂದು ಹೂಳಲಾಗಿದೆ.
ಹಕ್ಕಿಜ್ವರ ರೋಗದ ಕುರಿತು ಜಿಲ್ಲೆಯ ವೈದ್ಯರಿಗೆ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಾಗಾರದಲ್ಲಿ ರಾಷ್ಟ್ರೀಯ ರೋಗಗಳ ನಿಯಂತ್ರಣ ಕೇಂದ್ರ ಜಂಟಿ ಕಾರ್ಯದರ್ಶಿ ಡಾ| ನವೀನ್ ಮಾತನಾಡಿ, ಕೋಳಿಗಳ ನಾಶಪಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ವೈದ್ಯರು ಹಾಗೂ ಸಹಾಯಕರು ಕಾರ್ಯಾಚರಣೆ ಮುಗಿದ ಅನಂತರ 10 ದಿನ ಮನೆಗಳಿಗೆ ತೆರಳುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
10 ದಿನ ವೈರಸ್ ಪ್ರಭಾವ ಇರುವ ಸಾಧ್ಯತೆಗಳಿದ್ದು, ಒಂದು ವಾರ ಅವರು ಪ್ರತ್ಯೇಕವಾಗಿ ವಾಸಿಸುವಂತೆ ನೋಡಿಕೊಳ್ಳಬೇಕು. ಫಾರ್ಮ್ ಸುತ್ತಲಿನ 3 ಕಿ.ಮೀ. ವ್ಯಾಪ್ತಿಯ 3 ಗ್ರಾಮಗಳ ಜನರ ತಪಾಸಣೆ ಮಾಡಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ಸ್ವಯಂ ರಕ್ಷಣೆ ಅನುಸರಿಸಿ ಕೂಡಲೇ ಚಿಕಿತ್ಸೆ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
-ಉದಯವಾಣಿ