ಕರ್ನಾಟಕ

34 ಕೋಟಿ ಸ್ವಾಹ-ಸಿಐಡಿ ತನಿಖೆ: ಕುಷ್ಟಗಿಯಲ್ಲಿ ಸಣ್ಣ ನೀರಾವರಿ ಅಕ್ರಮ-26 ಎಂಜಿನಿಯರ್ ಸಸ್ಪೆಂಡ್

Pinterest LinkedIn Tumblr

shivaraja-thagadangiಬೆಂಗಳೂರು, ಮೇ ೧೨- ಕುಷ್ಠಗಿ ಸಣ್ಣ ನೀರಾವರಿ ವಿಭಾಗದಲ್ಲಿ 34 ಕೋಟಿ 35 ಲಕ್ಷ 77 ಸಾವಿರ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ 26 ಎಂಜಿನಿಯರ್‌ಗಳನ್ನು ಸಸ್ಪೆಂಡ್ ಮಾಡಿ, ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜತಗಂಡಗಿ ಅವರು ಇಂದಿಲ್ಲಿ ತಿಳಿಸಿದರು.
ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು. ಕಾಲ ಮಿತಿಯಲ್ಲಿ ತನಿಖೆ ವರದಿಯನ್ನು ತರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಸ್ಪೆಂಡ್ ಆಗಿರುವ 26 ಎಂಜಿನಿಯರ್‌ಗಳ ಪೈಕಿ 9 ಮಂದಿ ಪಿಡಬ್ಲ್ಯೂಡಿ, ಮತ್ತೊಬ್ಬರು ಲೆಕ್ಕಪತ್ರ ಇಲಾಖೆ ಸೇರಿದವರಾಗಿದ್ದಾರೆ. ಇವರು 47 ಮಂದಿ ಗುತ್ತಿಗೆದಾರರ ಹೆಸರಲ್ಲಿ ಬಿಲ್ ಪಾವತಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕಪ್ಪುಪಟ್ಟಿಗೆ
47 ಗುತ್ತಿಗೆದಾರರನ್ನು ಕುಪ್ಪುಪಟ್ಟಿಗೆ ಸೇರ್ಪಡೆ ಮಾಡಿ ಅವರ ಲೈಸೆನ್ಸ್ ರದ್ದುಪಡಿಸಲು ತೀರ್ಮಾನಿಸಲಾಗಿದೆ. ಅವರಿಂದ ಹಣ ವಸೂಲಾತಿ ಬಗ್ಗೆ ನಿಯಮಾವಳಿಗಳನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದುರ್ಬಳಕೆ ಸುಳಿವು ಬಂದ ಕೂಡಲೇ ಕಲುಬುರುಗಿ ವಿಭಾಗದ ಸೂಪರಿಟೆಂಡೆಂಟ್ ಎಂಜಿನಿಯರ್ ಮುಖಾಂತರ ವರದಿ ತರಿಸಿಕೊಂಡು ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
26 ಮಂದಿ ಸಸ್ಪೆಂಡ್ ಆಗಿರುವ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ 8 ಮಂದಿ ಎಂಜಿನಿಯರ್‌ಗಳಿಗೆ ಪ್ರಭಾರ ಜವಾಬ್ದಾರಿ ನೀಡಲಾಗಿದೆ ಎಂದು ಅವರು ಹೇಳಿದರು.
ಒತ್ತುವರಿ ತೆರವು
ರಾಜ್ಯದಲ್ಲಿನ 2957 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕಾಗಿ 90.95 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಶೇ. 50 ರಿಂದ 60 ರಷ್ಟು ಕಾಮಗಾರಿಗಳು ಮುಗಿದಿವೆ. ಕಳೆದ ಎರಡು ವರ್ಷಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1 ಕೆರೆಯಂತೆ ಈಗಾಗಲೇ 380 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಕೆರೆಗಳ ಹೂಳೆತ್ತಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1470 ಕೆರೆಗಳ ಹೂಳೆತ್ತಲು ಅನುದಾನ ಬಿಡುಗಡೆ ಮಾಡುವಂತೆ ಕೇಳಲಾಗಿದೆ ಎಂದ ಅವರು, ಕೆರೆಗಳ ಹೂಳೆತ್ತಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿ ರೂ ಸಾಕಾಗುವುದಿಲ್ಲ ಇನ್ನು ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಎಲ್ಲೆಲ್ಲಿ ಜಲ ಮೂಲಗಳ ಲಭ್ಯವಿದೆಯೋ ಅವುಗಳನ್ನು ಬಳಸಿಕೊಂಡು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಈ ವರ್ಷ ಚಾಲನೆ ನೀಡಲಾಗುವುದು ಎಂದು ಸಚಿವ ಶಿವರಾಜತಗಂಡಗಿ ತಿಳಿಸಿದರು.

Write A Comment