ರಾಷ್ಟ್ರೀಯ

ಗೋಡ್ಸೆ ಸೆರೆಹಿಡಿದಿದ್ದ ಶೂರನ ಪತ್ನಿಗೆ ₹5 ಲಕ್ಷ ನೆರವು

Pinterest LinkedIn Tumblr

Odisha

ಭುವನೇಶ್ವರ್ (ಪಿಟಿಐ): ಮಹಾತ್ಮ ಗಾಂಧಿ ಹಂತಕ ನಾಥುರಾಂ ಗೋಡ್ಸೆಯನ್ನು ಸೆರೆ ಹಿಡಿಯುವಲ್ಲಿ ವೀರತನ ತೋರಿದ್ದ ರಘು ನಾಯಕ್ ಸತ್ತ 33 ವರ್ಷಗಳ ನಂತರ ಅವರ ಪತ್ನಿಗೆ ಒಡಿಶಾ ಸರ್ಕಾರ ಐದು ಲಕ್ಷ ರೂಪಾಯಿ ನೆರವು ನೀಡಿದೆ.

ಬುಧವಾರ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ನಾಯಕ್ ಪತ್ನಿ ಮಂಡೋದರಿ ನಾಯಕ್ ಅವರನ್ನು ಸನ್ಮಾನಿಸಿ ₹5 ಲಕ್ಷದ ಚೆಕ್ ವಿತರಿಸಿದ್ದಾರೆ.

ಈ ವೇಳೆ, ಕೇಂದ್ರಪರ ಜಿಲ್ಲಾಧಿಕಾರಿ ಹಾಗೂ ನಾಯಕ್ ಕುಟುಂಬದ ಸದಸ್ಯರು ಹಾಜರಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಘು ನಾಯಕ್ ಅವರು ಬದುಕಿದ್ದಾಗ ಅವರ ಸಾಹಸ ಮೆಚ್ಚಿ ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು 500 ರೂಪಾಯಿ ಬಹುಮಾನ ನೀಡಿದ್ದರು.

ಕಷ್ಟ ಅರಿತು ನೆರವು: ನಾಯಕ್ ಅವರು 1983ರಲ್ಲಿ ಮೃತಪಟ್ಟಿದ್ದರು. ನಂತರದಲ್ಲಿ ಅವರ ಮಗ ಅಸುನೀಗಿದ್ದರು. ಸದ್ಯ ಮಂಡೋದರಿ ಅವರು ಮಗಳೊಂದಿಗೆ ವಾಸಿಸುತ್ತಿದ್ದಾರೆ. ಅವರು ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದರು. ಇದನ್ನು ಅರಿತು ನೆರವು ನೀಡಲು ಸರ್ಕಾರ ನಿರ್ಧರಿಸಿತ್ತು ಎಂದು ಮುಖ್ಯಮಂತ್ರಿ ಅವರ ಕಚೇರಿ ಹೇಳಿದೆ.

ಏನಾಗಿದ್ದರು ನಾಯಕ್?: ಒಡಿಶಾದ ಕೇಂದ್ರಪರ ಜಿಲ್ಲೆಯ ಜಗುಲೈಪದಾ ಗ್ರಾಮದ ವಾಸಿ ರಘು ಅವರು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ತೋಟದ ಕೆಲಸ ಮಾಡುತ್ತಿದ್ದರು. ಗಾಂಧಿ ಅವರನ್ನು ಗೋಡ್ಸೆ ಹತ್ಯೆ ಮಾಡಿದ್ದು ಅಲ್ಲಿಯೇ. ಆಗ ರಘು ಅವರು ಗಾಂಧಿಜಿ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಆದರೆ, ಗೋಡ್ಸೆ ಅವರನ್ನು ಸೆರೆ ಹಿಡಿಯುವಲ್ಲಿ ವೀರತನ ಮೆರೆದಿದ್ದರು.

Write A Comment