ಕರ್ನಾಟಕ

ಬೆಂಗಳೂರು ಐಐಎಸ್ ಸಿ ಮೇಲೆ ಉಗ್ರ ದಾಳಿ ಪ್ರಕರಣ: ಐವರು ಲಷ್ಕರ್ ಉಗ್ರರಿಗೆ ಜೀವಾವಧಿ ಖಾಯಂ ಮಾಡಿ “ಹೈ” ಆದೇಶ

Pinterest LinkedIn Tumblr

IISC-attackers

ಬೆಂಗಳೂರು: 2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ-ಐಐಎಸ್‌ಸಿ ಮೇಲೆ ನಡೆದಿದ್ದ ಉಗ್ರ ದಾಳಿ ಹಾಗೂ ಓರ್ವ ವಿಜ್ಞಾನಿ ಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಲಷ್ಕರ್- ಎ-ತೊಯ್ಬಾ ಸಂಘಟನೆಯ ಐದು ಉಗ್ರರಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಖಾಯಂಗೊಳಿಸಿದೆ.

ಈ ಹಿಂದೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಉಗ್ರರು ಹೈಕೋರ್ಟ್ ಮೊರೆ ಹೋಗಿದ್ದರು. ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಉಗ್ರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾ. ಮೋಹನಶಾಂತನುಗೌಡರ್ ಹಾಗೂ ನ್ಯಾ.ಕೆ.ಎನ್. ಫಣೀಂದ್ರ ಅವರಿದ್ದ ವಿಭಾಗೀಯ ಪೀಠ ಬುಧವಾರ ಉಗ್ರರಿಗೆ ಜೀವವಾಧಿ ಶಿಕ್ಷೆಯನ್ನು ಖಾಯಂಗೊಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು.

ಸ್ಥಳದಲ್ಲಿ ದೊರೆತ ಜಿಲೆಟಿನ್ ಕಡ್ಡಿಗಳು, ಎಲೆಕ್ಟ್ರಿಕಲ್ ಡಿಟೋನೇಟರ್ ಗಳು, ಬಾಂಬ್ ಗಳನ್ನು ವಶಪಡಿಸಿಕೊಂಡ ವಿಚಾರವನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, “ಇವರ ಅಂತಿಮ ಗುರಿ ಭಾರತ ಸರ್ಕಾರದ ಉದ್ಯೋಗಿಯಾಗಿದ್ದರು. ನಮ್ಮ ಅಭಿಪ್ರಾಯದಲ್ಲಿ ಹೇಳುವುದಾದರೆ ಇಂತಹ ಪ್ರಕರಣಗಳನ್ನು ಅಥವಾ ದುಷ್ಕೃತ್ಯಗಳನ್ನು ಆರಂಭಿಕ ಹಂತದಲ್ಲೇ ಚಿವುಟಿಹಾಕಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಓರ್ವ ಉಗ್ರನ ಶಿಕ್ಷೆಯಲ್ಲಿ ವಿನಾಯಿತಿ
ಇನ್ನು ನಿನ್ನೆಯ ವಿಚಾರಣೆಯಲ್ಲಿ ಉಗ್ರದಾಳಿಯಲ್ಲಿ ಪಾಲ್ಗೊಂಡಿದ್ದ ಓರ್ವ ಉಗ್ರನ ಶಿಕ್ಷೆ ಅವಧಿಯನ್ನು ಹೈಕೋರ್ಟ್ ಕಡಿತಗೊಳಿಸಿದ್ದು, ಉಗ್ರನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಏಳು ವರ್ಷಕ್ಕೆ ಇಳಿಸಿ ನ್ಯಾಯಪೀಠ ಆದೇಶ ನೀಡಿದೆ. ಉಳಿದಂತೆ ಎಲ್ಲ ಉಗ್ರರಿಗೂ ತಲಾ 5 ಸಾವಿರ ರು.ದಂಡ ವಿಧಿಸಲಾಗಿದೆ. ಸೆಷನ್ಸ್‌ಕೋರ್ಟ್ ತೀರ್ಪು ಎತ್ತಿ ಹಿಡಿದ ಹೈಕೋರ್ಟ್ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಮೊಹಮ್ಮದ್ ರಿಯಾಜ್ ಉರ್ ರೆಹಮಾನ್, ಅಫ್ಜರ್ ಪಾಷಾ, ನೂರುಲ್ಲಾ ಖಾನ್, ಮೊಹಮ್ಮದ್ ಇರ್ಫಾನ್, ನಜೀಮ್ ಉದ್ದೀನ್ ಅಲಿಯಾಸ್ ಮುನ್ನಾ ಅವರನ್ನು “ಕ್ರಿಮಿನಲ್ ಸಂಚು, ದೇಶದ ವಿರುದ್ಧ ಯುದ್ಧ ಸಾರಿದ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ-1908, ಸಶಸ್ತ್ರ ಕಾಯ್ದೆ-1959 ಅಡಿ ತ್ವರಿತ ನ್ಯಾಯಾಲಯ 2011ರ ಡಿ.18ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇನ್ನೋರ್ವ ಆರೋಪಿ ಮೆಹಬೂಬ್ ಇಬ್ರಾಹಿಂ ಸಾಬ್ ಚೋಪ್ಡರ್ ಎಂಬಾತನ್ನು ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು. ಪ್ರಕರಣದ ಮತ್ತೋರ್ವ ಆರೋಪಿಯನ್ನು ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಆರೋಪದಿಂದ ಮುಕ್ತಗೊಳಿಸಲಾಗಿದೆ.

2005ರ ಡಿಸೆಂಬರ್ 28ರಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕಾರ್ಯಾಗಾರ ನಡೆಯುತ್ತಿದ್ದ ವೇಳೆ ಸಂಜೆ 7ರ ಸುಮಾರಿಗೆ ಬಿಳಿ ಅಂಬಾಸಿಡರ್ ಕಾರಿನಲ್ಲಿ ಒಳನುಗ್ಗಿದ್ದ ಲಷ್ಕರ್ ಉಗ್ರ ಸಂಘಟನೆಯ 7 ಉಗ್ರರು, ಏಕಾಏಕಿ ಗುಂಡಿನ ಸುರಿಮಳೆ ಆರಂಭಿಸಿದ್ದರು. ಅದೃಷ್ಟವಶಾತ್ ಈ ಸಂದರ್ಭ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ರಾತ್ರಿ ಊಟಕ್ಕೆ ತೆರಳಿದ್ದರು. ಆದರೆ ಘಟನೆಯಲ್ಲಿ ದೆಹಲಿಯ ವಿಜ್ಞಾನಿ ಪ್ರೊ.ಮನೀಷ್ ಚಂದ್ರಪುರಿ ಎಂಬುವರಿಗೆ ಗುಂಡೇಟು ಬಿದ್ದು ಅವರು ಸಾವನ್ನಪ್ಪಿದ್ದರು. ಅಲ್ಲದೆ ಇತರೆ ನಾಲ್ವರು ಗಾಯಗೊಂಡಿದ್ದರು. ಆಗ ಇಬ್ಬರು ಕಾವಲುಗಾರರು ಪ್ರತಿ ದಾಳಿ ನಡೆಸುತ್ತಿದ್ದಂತೆ ಉಗ್ರರು ಪರಾರಿಯಾಗಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು 2006ರಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

Write A Comment