ಕರ್ನಾಟಕ

ಕುಗ್ರಾಮವನ್ನು ಸ್ಮಾರ್ಟ್‌ ಹಳ್ಳಿಯಾಗಿಸಿದ ಶಿವಣ್ಣ

Pinterest LinkedIn Tumblr

shivaಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಹುಟ್ಟೂರಿನ ಋಣ ತೀರಿಸಲು ತೊಟ್ಟ ಪಣದಿಂದಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮವೀಗ ಹೊಗೆರಹಿತ, ಬಯಲು ಶೌಚಾಲಯ ಮುಕ್ತ ಹಳ್ಳಿ ಎಂಬ ಹೆಗ್ಗಳಿಕೆ ಪಡೆಯುವ ಜತೆಗೆ ಪರಿಸರ ಸ್ನೇಹಿ ಸ್ಮಾರ್ಟ್‌ ಗ್ರಾಮವಾಗಿ ರೂಪಾಂತರ ಹೊಂದಿದೆ. ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ನೆರವಿನಿಂದ ವೇದಿಕೆ ಅಧ್ಯಕ್ಷ ಶಿವಣ್ಣ ನೀಡಿದ ಯೋಜನೆಗಳ ಫ‌ಲದಿಂದ ಕುಗ್ರಾಮ ಇದೀಗ ಮಿಂಚುವಂತಾಗಿದೆ.

ಬಯಲು ಶೌಚದಿಂದ ಮಹಿಳೆಯರಿಗಾಗುತ್ತಿದ್ದ ಮುಜುಗರ ತಪ್ಪಿಸಲು ವೇದಿಕೆಯು ಸ್ವಂತ ವೆಚ್ಚದಲ್ಲಿ ಪರಿಸರ ಸ್ನೇಹಿ ಹಸಿರು ಶೌಚಾಲಯ ನಿರ್ಮಿಸಿ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಿದೆ. ತಮಿಳುನಾಡಿನ ಸಿಗಂದಾ ಎಂಬ ಕಂಪನಿ ಮೂಲಕ 200 ಶೌಚಾಲಯಗಳನ್ನು ಉಚಿತವಾಗಿ ನಿರ್ಮಿಸಿಕೊಟ್ಟಿದೆ. ಶೌಚಾಲಯದ ಜತೆಗೆ ಪ್ರತಿ ಮನೆಗೂ ನೀರು ಸಂಗ್ರಹಿಸಲು ತೊಟ್ಟಿ ನಿರ್ಮಿಸುವ ಮೂಲಕ ಗಮನ ಸೆಳೆದಿದೆ.

ದಡದಪುರ ಗ್ರಾಮ ಬಂಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ಬಯಲು ಶೌಚ ಮುಕ್ತ ಕಾರ್ಯಕ್ರಮವನ್ನು ಸ್ವಗ್ರಾಮಕ್ಕೆ ಸೀಮಿತಗೊಳಿಸದೆ ಪಂಚಾಯ್ತಿ ವ್ಯಾಪ್ತಿಯ ಆರು ಹಳ್ಳಿಗಳಿಗೂ ವಿಸ್ತರಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕಾಗಿ ಪ್ರತಿ ಕುಟುಂಬಕ್ಕೆ 5 ಸಾವಿರ ರೂ. ವೆಚ್ಚದ ಸೀಮೆಂಟ್‌ ರಿಂಗ್‌, ಬೇಸಿನ್‌, ಕಮೋಡ್‌, ಪೈಪ್‌ ಇತ್ಯಾದಿ ವಸ್ತು ಉಚಿತವಾಗಿ ನೀಡಿ 600ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಲಾಗಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ 1,088 ಮನೆಗಳಿದ್ದು, ಈಗಾಗಲೇ 990 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಉಳಿದಂತೆ 25 ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಿವಣ್ಣ ಹೇಳಿದ್ದಾರೆ. ಇಷ್ಟೇ ಅಲ್ಲದೆ ಗ್ರಾಮದ ಮಹಿಳೆಯರಿಗಾಗಿ ವೇದಿಕೆ ವತಿಯಿಂದ 5 ಗುಂಟೆ ಜಾಗ ಖರೀದಿಸಿ, ಸುಂದರವಾದ ಸ್ತ್ರೀಶಕ್ತಿ ಭವನ ನಿರ್ಮಿಸಲಾಗಿದೆ. ಮಹಿಳೆಯರಿಗಾಗಿ ಪಾದರಕ್ಷೆ ವಿತರಣೆ, ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ವೇದಿಕೆ ನಡೆಸುತ್ತಿದೆ. ಗ್ರಾಮದ ಶಾಲೆಯಲ್ಲಿ 110 ಮಕ್ಕಳಿಗೆ ಇಬ್ಬರೇ ಶಿಕ್ಷಕರು ಇದ್ದಿದ್ದರಿಂದ ಮಾಸಿಕ 8 ಸಾವಿರ ರೂ. ಗೌರವಧನ ನೀಡಿ ಹೆಚ್ಚುವರಿ ಶಿಕ್ಷಕರ ನೇಮಕ ಮಾಡಿದೆ. ಗ್ರಾಮದ ಋಣ ತೀರಿಸುವ ಉದ್ದೇಶದಿಂದ ಸಣ್ಣ ನೆರವು ನೀಡಿದ್ದೇನೆ. ಇದು ಬೇರೆಯವರಿಗೆ ಸ್ಫೂರ್ತಿ ಆದರೆ ಸಾಕು ಎಂಬುದು ವೇದಿಕೆ ಅಧ್ಯಕ್ಷ ಶಿವಣ್ಣ ಅವರ ಮಾತು.

ಹೊಗೆ ಮುಕ್ತ ಗ್ರಾಮ 230 ಮನೆಗಳಿರುವ ಹಳ್ಳಿಯಲ್ಲಿ 30 ಮನೆ ಹೊರತುಪಡಿಸಿ ಉಳಿದ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಇರಲಿಲ್ಲ. ಮಳವಳ್ಳಿಯ ಶಾಂಭವಿ ಏಜೆನ್ಸಿ ಮೂಲಕ 200 ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ನೀಡುವ ಮೂಲಕ ಹೊಗೆ ರಹಿತ ಮಾದರಿ ಹಳ್ಳಿಯನ್ನಾಗಿ ವೇದಿಕೆ ರೂಪಿಸಿದೆ.
-ಉದಯವಾಣಿ

Write A Comment