ಕರ್ನಾಟಕ

ಅಪ್ಪ ಕೇರಳಕ್ಕೆ, ಮಗ ಫಾರಿನ್‌ಗೆ… ಅನಾಥವಾಯ್ತು ಜೆಡಿಎಸ್

Pinterest LinkedIn Tumblr

kumaranna

ಬೆಂಗಳೂರು, ಮೇ ೭- ಅಪ್ಪ ಕೇರಳಕ್ಕೆ ಹೋಗಿದ್ದರೆ.. ಮಗ ಫಾರಿನ್‌ಗೆ ಹೋಗಿದ್ದಾರೆ. ದೊಡ್ಡ ಗೌಡರಿಗೆ ಕೇರಳ ಚುನಾವಣೆಯ ಚಿಂತೆಯಾದರೆ, ಸಣ್ಣಗೌಡರಿಗೆ ಮಗನ ಸಿನಿಮಾ ಚಿಂತೆ.. ಇವರ ಈ ಚಿಂತೆಗಳಿಂದ ಆಂತರಿಕ ಕಲಹಕ್ಕೆ ಸಿಲುಕಿ ಅನಾಥವಾಗಿದೆ ಜೆಡಿಎಸ್.

ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಿಧಾನಸಭೆಯಿಂದ ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ, ಶಿಕ್ಷಕರ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲ್ಲೀನವಾಗಿವೆ. ಆದರೆ ಇದೆಲ್ಲದರ ಉಸಾಬರಿಯನ್ನೇ ಬಿಟ್ಟಿರುವ ಜೆಡಿಎಸ್ ನಿರ್ಲಿಪ್ತವಾಗಿದೆ.

ಬಂಡಾಯದ ಬಾವುಟ
ಈಗಾಗಲೇ ಪಕ್ಷದಲ್ಲಿ ಚಲುವರಾಯ ಸ್ವಾಮಿ, ಜಮೀರ್ ಅಹ್ಮದ್, ಬಾಲಕೃಷ್ಣ, ಪುಟ್ಟಣ್ಣ, ಇಕ್ಬಾಲ್ ಅನ್ಸಾರಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಕ್ಷದ ಸಭೆಗಳಿಗೆ ಸತತವಾಗಿ ಗೈರು ಹಾಜರಾಗಿ ತಮ್ಮ ಅಸಮಾಧಾನ ಹೊರಹಾಕಿದ್ದು, ಪಕ್ಷ ತೊರೆಯುವ ಬಗ್ಗೆ ಸೂಚನೆ ನೀಡಿದ್ದಾರೆ.

ಚಲುವರಾಯ ಸ್ವಾಮಿ, ಬಾಲಕೃಷ್ಣ ಕಾಂಗ್ರೆಸ್ ಇಲ್ಲವೇ ಬಿಜೆಪಿ ಸೇರುವ ಚಿಂತನೆಯಲ್ಲಿದ್ದರೆ, ಜಮೀರ್ ಅಹ್ಮದ್ ಸ್ವತಂತ್ರ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರಂತೆ. ಇಕ್ಬಾಲ್ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.

ಪಕ್ಷದಲ್ಲಿ ಇಷ್ಟೆಲ್ಲಾ ಸಮಸ್ಯೆಯ ಮಧ್ಯೆ ರಾಜ್ಯಸಭೆ, ವಿಧಾನ ಪರಿಷತ್‌ಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿದ್ದರೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕೇರಳ ಪ್ರವಾಸದಲ್ಲಿದ್ದು, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಪ್ರವಾಸದಿಂದ ಹಿಂದಿರುಗಿದ ಬಳಿಕ ಮುಖಂಡರ ಸಭೆ ಕರೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಗೌಡರು ಹೇಳಿದ್ದಾರೆ.

ಇದರ ನಡುವೆ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ. ಆದರೆ ಅವರಿಗೆ ಪಕ್ಷದಲ್ಲಿನ ಸದ್ಯದ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಪಕ್ಷ ಆಂತರಿಕ ಕಚ್ಚಾಟ, ಭಿನ್ನಮತದಿಂದಾಗಿ ನೆಲಕಚ್ಚುತ್ತಿದ್ದರೂ ಕುಮಾರಸ್ವಾಮಿ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮಗ ನಿಖಿಲ್ ಗೌಡ ಅಭಿನಯಿಸುತ್ತಿರುವ `ಜಾಗ್ವಾರ್’ ಸಿನಿಮಾ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ಜಾಗ್ವಾರ್‌ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ ಎಂದು ಶಾಸಕಾಂಗ ಪಕ್ಷದ ಸಭೆಯನ್ನೇ ಕುಮಾರಸ್ವಾಮಿ ಮೈಸೂರಿನಲ್ಲಿ ನಡೆಸಿದ್ದರು. ಅಷ್ಟರ ಮಟ್ಟಿಗೆ ಸಿನಿಮಾ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಇದೀಗ ಚಿತ್ರೀಕರಣ ಫಾರಿನ್‌ಗೆ ಶಿಫ್ಟ್ ಆಗುತ್ತಿದ್ದು, ಶೂಟಿಂಗ್ ಸ್ಪಾಟ್ ನೋಡೋದಕ್ಕೆ ಫಾರಿನ್ ಟೂರ್ ಹೋಗಿದ್ದಾರಂತೆ. ಇನ್ನೊಂದೆರಡು ದಿನದಲ್ಲಿ ನಗರಕ್ಕೆ ವಾಪಸಾದರೂ ಸಹ ಚಿತ್ರ ತಂಡದೊಂದಿಗೆ ಮತ್ತೆ ವಿದೇಶಕ್ಕೆ ಹಾರಲಿದ್ದಾರೆ ಎಂಬ ಸುದ್ದಿ ಇದೆ.

Write A Comment