ಕರ್ನಾಟಕ

ನಾಡಿನ ಬರದ ಹಸಿವು ನೀಗಿಸುವಂತೆ ಕೇಂದ್ರಕ್ಕೆ ಸಿಎಂ ಮೊರೆ

Pinterest LinkedIn Tumblr

cmಬೆಂಗಳೂರು, ಮೇ 7- ರಾಜ್ಯದ 136 ತಾಲ್ಲೂಕುಗಳಲ್ಲಿ ಕಾಡುತ್ತಿರುವ ಭೀಕರ ಬರಕ್ಕೆ ನೆರವು ನೀಡಲು 12,039 ಕೋಟಿ ಅನುದಾನ ಒದಗಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಲಿದ್ದು, ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ವಿವರ ನೀಡುವುದಲ್ಲದೆ, ಆರ್ಥಿಕ ನೆರವಿಗಾಗಿ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ದೇಶದ 13 ರಾಜ್ಯಗಳಲ್ಲಿ ಗಂಭೀರ ಪರಿಸ್ಥಿತಿಯಲ್ಲಿ ಬರ ಎದುರಾಗಿರುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರ ಪೀಡಿತ ಆಯ್ದ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಅದರ ಅಂಗವಾಗಿ ಇಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಪ್ರತ್ಯೇಕ ಮಾತುಕತೆ ನಡೆಯಲಿದೆ.

ಸರ್ಕಾರದ ಪ್ರಮುಖ ಸಚಿವರು, ಹಿರಿಯ ಅಧಿಕಾರಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಕಂದಾಯ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನವದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಠಿಕಾಣಿ ಹೂಡಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಭೇಟಿಯ ಚರ್ಚೆಗೆ ಒದಗಿಸಬಹುದಾದ ಮಾಹಿತಿಗಳನ್ನು ಸಿದ್ಧಪಡಿಸಿದ್ದಾರೆ.

ಈ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಕೇಂದ್ರವು ರಾಜ್ಯಕ್ಕೆ ಸಾಕಷ್ಟು ನೆರವನ್ನು ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಹಿಂಗಾರು, ಮುಂಗಾರು ಸಂಪೂರ್ಣ ವಿಫಲವಾಗಿರುವುದರಿಂದ ಕೇಂದ್ರದ ಮಾರ್ಗಸೂಚಿ ಅನುಸಾರವೇ ಸುಮಾರು 23 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿಗಳು ಹಲವಾರು ಬಾರಿ ಹೇಳಿದ್ದಾರೆ. ಮುಂಗಾರು ವೈಫಲ್ಯದಿಂದ ಸುಮಾರು 15 ಸಾವಿರ ಕೋಟಿ, ಹಿಂಗಾರು ವೈಫಲ್ಯದಿಂದ ಸುಮಾರು 7 ಸಾವಿರ ಕೋಟಿ ನಷ್ಟವಾಗಿರುವ ಕುರಿತು ಪದೇ ಪದೇ ಪ್ರಸ್ತಾಪಿಸಲಾಗುತ್ತಿತ್ತು. ಆದರೆ, ಒಮ್ಮೆಲೆ 27 ಸಾವಿರ ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದಿಂದ ನೆರವು ಸಿಗುವುದಿಲ್ಲ ಎಂಬ ಅನುಮಾನದ ಮೇಲೆ ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ಒಟ್ಟು 12,039ಕೋಟಿ ನಷ್ಟವನ್ನು ಅಂದಾಜಿಸಿದ್ದು, ಇದಕ್ಕೆ ಪೂರಕವಾದ ದಾಖಲೆಗಳು ಮತ್ತು ವರದಿಗಳನ್ನು ಪ್ರಸ್ತಾವನೆಯೊಂದಿಗೆ ಲಗತ್ತಿಸಿದೆ.

ಸಂಜೆ ಪ್ರಧಾನಿ ಅವರನ್ನು ಭೇಟಿ ಮಾಡುವ ಸಿದ್ದರಾಮಯ್ಯ ಅವರುಬರ ಪರಿಸ್ಥಿತಿಯಿಂದಾಗಿರುವ ನಷ್ಟದ ಕುರಿತು ಇನ್ನಷ್ಟು ವಿವರಣೆ ನೀಡಲಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ತುರ್ತಾಗಿ ಸುಮಾರು 5ಸಾವಿರ ಕೋಟಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ ಎನ್ನಲಾಗಿದೆ. ಪ್ರಧಾನಿ ಅವರೇ ಖುದ್ದಾಗಿ ಮಾತುಕತೆಗೆ ಆಹ್ವಾನಿಸಿರುವುದರಿಂದ ಬರ ಪರಿಹಾರಕ್ಕೆ ತುರ್ತು ನೆರವು ಸಿಗುವ ನಿರೀಕ್ಷೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಬರದಿಂದಾಗಿ ಜನ-ಜಾನುವಾರುಗಳು ಕಂಗಾಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಲುಪಿದ್ದು, ಕೆಲವು ಭಾಗಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನು ಕೆಲವು ಭಾಗಗಳಲ್ಲಿ ನೀರು ಪೂರೈಕೆ ಇಲ್ಲದೆ ಜನ ಪರಿತಪಿಸುತ್ತಿದ್ದಾರೆ. ಐದಾರು ಕಿ.ಮೀ. ದೂರದಿಂದ ನೀರು ತರುತ್ತಿರುವ ದುಸ್ಥಿತಿ ಇದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಟ್ಯಾಂಕರ್‌ಗಳು ಮತ್ತು ಆರ್ಥಿಕ ನೆರವನ್ನು ನೀಡುವಂತೆಯೂ ರಾಜ್ಯ ಸರ್ಕಾರ ಮನವಿ ಮಾಡಲಿದೆ.

Write A Comment