ಕರ್ನಾಟಕ

ಮುಖ್ಯಮಂತ್ರಿ ತವರೂರು ಮೈಸೂರು ಜಿಲ್ಲಾ ಪಂಚಾಯ್ತಿ ಜೆಡಿಎಸ್-ಬಿಜೆಪಿ ತೆಕ್ಕೆಗೆ

Pinterest LinkedIn Tumblr

bjpಮೈಸೂರು, ಮೇ 7- ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ತವರೂರು ಮೈಸೂರು ಜಿಲ್ಲಾ ಪಂಚಾಯ್ತಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಪಾಲಾಗಿದೆ. ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಹಗ್ಗಜಗ್ಗಾಟದ ನಡುವೆಯೇ ಜೆಡಿಎಸ್-ಬಿಜೆಪಿ ಒಂದಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದು, ಕೊನೆಯ ಕ್ಷಣದವರೆಗೂ ಕಾರ್ಯತಂತ್ರ ರೂಪಿಸಿದ ಕಾಂಗ್ರೆಸ್ ಮುಗ್ಗರಿಸಿದೆ. ಅಣ್ಣೂರು ಕ್ಷೇತ್ರದ ಜೆಡಿಎಸ್‌ನ ನಹಿಮಾ ಸುಲ್ತಾನ್ ಜಿಪಂ ಅಧ್ಯಕ್ಷೆಯಾಗಿ, ಮೂಗೂರು ಕ್ಷೇತ್ರದ ಬಿಜೆಪಿಯ ಸದಸ್ಯೆ ಕೈಯಂಬಳ್ಳಿ ನಟರಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ ಇತ್ತು. ಈ ನಡುವೆ ಅಧ್ಯಕ್ಷ ಸ್ಥಾನಕ್ಕೆ ನಹಿಮಾ ಸುಲ್ತಾನ್ ಹಾಗೂ ಪರಿಮಳಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಇಬ್ಬರೂ ಕೂಡ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ, ಚಿಕ್ಕಮಾದು, ಸಾ.ರಾ.ಮಹೇಶ್ ಸೇರಿದಂತೆ ಹಲವು ಮುಖಂಡರು ಒಮ್ಮತದ ತಿರ್ಮಾನಕ್ಕೆ ಬರಲು ಸಾಕಷ್ಟು ಚರ್ಚೆ ನಡೆಸಿದರು. ಕೊನೆಗೆ ಪರಿಮಳಾ ಅವರು ನಾಮಪತ್ರ ಹಿಂಪಡೆದರು.

ಒಟ್ಟು 49 ಸದಸ್ಯ ಬಲದ ಜಿಪಂನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮತದಾನ ನಡೆದು ನಹಿಮಾ ಸುಲ್ತಾನ 27 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರೆ, ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಜಯಮ್ಮ 22 ಮತಗಳನ್ನು ಪಡೆದರು. ಇನ್ನು ಉಪಾಧ್ಯಕ್ಷ ಸ್ಥಾನದಲ್ಲಿ ಅಚ್ಚರಿಯ ಬೆಳವಣಿಗೆಯಂತೆ ಬಿಜೆಪಿಯ ಕೈಯಂಬಳ್ಳಿ ನಟರಾಜ್ ಕಣಕ್ಕಿಳಿದರು. ಅವರೂ ಕೂಡ 27 ಮತಗಳನ್ನು ಪಡೆದು ಜಯಶೀಲರಾದರು. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಹೊರಗೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Write A Comment