ಕರ್ನಾಟಕ

ಕೆಎಸ್ಓಯು ವಿಚಾರ: ಪ್ರಧಾನಿಗೆ ಪತ್ರ ಬರೆದ ಮಂಡ್ಯದ ವಿದ್ಯಾರ್ಥಿನಿಗೆ ಬಂತು ಪ್ರತಿಕ್ರಿಯೆ

Pinterest LinkedIn Tumblr

PM-ModiNarendraModioffice

ಮಂಡ್ಯ: ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ(ಕೆಎಸ್ ಒಯು)ದ ಮಾನ್ಯತೆ ರದ್ದು ವಿಚಾರ ಕುರಿತು ಮಂಡ್ಯದ ವಿದ್ಯಾರ್ಥಿನಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರಧಾನ ಮಂತ್ರಿ ಕಚೇರಿಯಿಂದ ಪ್ರತಿಕ್ರಿಯೆಯೂ ಬಂದಿದೆ.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಎಲ್ಲಾ ಕೋರ್ಸ್ ಗಳ ಮಾನ್ಯತೆ ರದ್ದುಗೊಳಿಸಿರುವುದರಿಂದ ನಮಗೆ ತೊಂದರೆ ಎದುರಾಗಿದ್ದು, ಇದನ್ನು ಸರಿಪಡಿಸಿ ಎಂದು ಮಂಡ್ಯದ ಶಂಕರನಗರದ ನಿವಾಸಿ 22 ವರ್ಷದ ಮೇರಿ ಮೆಟಿಲ್ಡಾ ಗೊವಿಯಾಸ್ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಳು.

ಕೆಎಸ್ಓಯುನಲ್ಲಿ ನಾನು ಬಿಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಯುಜಿಸಿ ಕೆಎಸ್ ಒಯುನ ಮಾನ್ಯತೆ ರದ್ದುಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಕೆಎಸ್ಒಯುನಲ್ಲಿ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ. ಅಷ್ಟೇ ಅಲ್ಲದೇ, ಉನ್ನತ ಮಟ್ಟದ ವ್ಯಾಸಂಗಕ್ಕೂ ಇದರ ಪದವಿಯನ್ನು ಪರಿಗಣಿಸುತ್ತಿಲ್ಲ. ಇನ್ನು ಖಾಸಗಿ ಸಂಸ್ಥೆಗಳು ಕೆಎಸ್ ಓನಲ್ಲಿ ಪದವಿ ಪಡೆದಿದ್ದಾರೆಂದು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾಗಿ ತಾವೇ ಖುದ್ದಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಳು.

ವಿದ್ಯಾರ್ಥಿನಿಯ ಪತ್ರಕ್ಕೆ ಪ್ರಧಾನ ಮಂತ್ರಿ ಕಚೇರಿಯಿಂದ ಏಪ್ರಿಲ್ 29ರಂದು ಪ್ರತಿಕ್ರಿಯೆ ಬಂದಿದ್ದು, ಈ ಪತ್ರವನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯುಜಿಸಿಯ ನಿಯಮಗಳನ್ನು ಕೆಎಸ್ಒಯು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 2012-2013ರ ನಂತರದ ಮುಕ್ತ ವಿಶ್ವವಿದ್ಯಾಲಯದ ಎಲ್ಲಾ ಕೋರ್ಸ್ ಗಳ ಮಾನ್ಯತೆಗಳನ್ನು ಯುಜಿಸಿ ರದ್ದುಗೊಳಿಸಿತ್ತು.

Write A Comment