ಕರ್ನಾಟಕ

ಹೆಚ್ಚಿನ ಬರ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಮನವಿ : ಸಿಎಂ

Pinterest LinkedIn Tumblr

sidduಬೆಂಗಳೂರು, ಮೇ 2- ಬರ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ನೀಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪ್ರಸ್ತುತ ಕೇಂದ್ರ ನೀಡಿರುವ ಹಣ ಸಾಲದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ರಾಜಭವನದಲ್ಲಿ ನಡೆದ ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಡಿ.ಎನ್. ನರಸಿಂಹರಾಜು ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ 723 ಕೋಟಿ ರೂ. ಮಂಜೂರು ಮಾಡಿದೆ ಎಂದರು. ಆದರೆ ಅದು ಸಾಲುವುದಿಲ್ಲ.

ಈ ಹಿನ್ನೆಲೆಯಲ್ಲಿ ಮತ್ತೆ ಪ್ರಧಾನಿ ಅವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ಕೋರಲಾ ಗುವುದು ಎಂದು ಸ್ಪಷ್ಟಪಡಿಸಿದರು. ಬರ ಪೀಡಿತ ಪ್ರದೇಶಗಳ ಬಗ್ಗೆ ಈಗಾಗಲೇ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ. ಮತ್ತೊಮ್ಮೆ ಸಂಪುಟ ಉಪಸಮಿತಿ ಬರಪೀಡಿತ ಪ್ರದೇಶಗಳಿಗೆ ತೆರಳಿ ರಚಿಸಿದ ಅಂತಿಮ ವರದಿಯನ್ನು ನೀಡಲಿದ್ದೇವೆ. ಇದಲ್ಲದೆ, ಕೇಂದ್ರದ ಬರ ಅಧ್ಯಯನ ತಂಡವೂ ಈ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅದರ ವರದಿಯೂ ಲಭ್ಯವಾಗಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಹಿತಿ ಕೊರತೆ ಇದೆ ಎಂದ ಅವರು, ನಾವೇನು ಕಾಟಾಚಾರಕ್ಕೆ ಬಂದು ಅಧ್ಯಯನ ನಡೆಸುತ್ತಿಲ್ಲ. ಬರಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಅರಿತು ಅದಕ್ಕೆ ಅಗತ್ಯವಿರುವ ವ್ಯವಸ್ಥೆಗೆ ಸೂಚನೆ ನೀಡಿದ್ದೇವೆ ಎಂದರು. ಯಡಿಯೂರಪ್ಪ ಅವರು ಬರದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬರಪರಿಹಾರದ ಹಣ ಹಂಚಿಕೆ ಮಾಡಿ ಉಳಿದ ಹಣವನ್ನು ಇತರೆ ಜಿಲ್ಲೆಗಳಿಗೂ ನೀಡುವ ಉದ್ದೇಶದಿಂದ ವಾಪಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಪರಿಹಾರದ ಹಣವನ್ನು ವಾಪಸ್ ಕೊಡಲು ಹೇಳುತ್ತಿಲ್ಲ. ಸರ್ವೆ ಪ್ರಕಾರ ಫಲಾನುಭವಿಗಳಿಗೆ ಹಂಚಿ ಹೆಚ್ಚುವರಿಯಾಗಿ ಉಳಿದ ಹಣವನ್ನು ಹಿಂಪಡೆದು ಅಗತ್ಯವಿರುವ ಕಡೆ ಅದರ ಉಪಯೋಗ ಮಾಡುವ ಚಿಂತನೆ ಇದೆ ಎಂದು ವಿವರಿಸಿದರು. ಇಂದು ಬೆಳಗಾವಿ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮ ವಹಿಸಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಮಹದಾಯಿ ಜಲವಿವಾದ:
ಮಹದಾಯಿ ಜಲ ವಿವಾದದಲ್ಲಿ ಪ್ರಧಾನಿ ಅವರು ಮಧ್ಯಸ್ಥಿತಿಕೆವಹಿಸಿ ಇರುವ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗುವುದು. ಆ ವ್ಯಾಪ್ತಿಯ ಜನರು ಪಕ್ಷಾತೀತವಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಮಧ್ಯಸ್ಥಿತಿಕೆಗಾಗಿ ಮನವಿ ಮಾಡಲಾಗುವುದು ಎಂದು ಹೇಳಿದರು.

Write A Comment