ಕರ್ನಾಟಕ

ಒಬ್ಬ ವಿದ್ಯಾರ್ಥಿ ಇದ್ದರೂ ಸರ್ಕಾರಿ ಶಾಲೆ ಮುಚ್ಚಲ್ಲ: ಸಚಿವ ಕಿಮ್ಮನೆ ರತ್ನಾಕರ

Pinterest LinkedIn Tumblr

kimmaneಬೆಂಗಳೂರು, ಮೇ 2-ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಕನಿಷ್ಠ ಒಬ್ಬ ವಿದ್ಯಾರ್ಥಿ ಇದ್ದರೂ ಆ ಶಾಲೆಯನ್ನು ಮುಚ್ಚುವುದಿಲ್ಲ. ಒಂದು ವೇಳೆ ಒಬ್ಬ ವಿದ್ಯಾರ್ಥಿಯೂ ಇಲ್ಲದಿದ್ದರೆ ಅಂತಹ ಶಾಲೆಗೆ ಬೀಗ ಹಾಕುತ್ತೇವೆ ಆದರೆ ಆ ಶಾಲೆಯ ಅಸ್ತಿತ್ವ ರದ್ದಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿ ದಾಖಲಾಗದೆ ಹೋದರೆ ಶಾಲೆಗೆ ಬೀಗ ಹಾಕುತ್ತೇವೆಯೇ ಹೊರತು, ಅದರ ಅಸ್ತಿತ್ವ ರದ್ದಾಗಿರುವುದಿಲ್ಲ. ಒಬ್ಬ ವಿದ್ಯಾರ್ಥಿ ದಾಖಲಾದರೂ ಶಾಲೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಲ್ಲದ ಶಾಲೆಯ ಶಿಕ್ಷಕರನ್ನು ಬೇರೆ ಕಡೆ ನಿಯೋಜಿಸಿರುತ್ತೇವೆ. ಮತ್ತೆ ಇಲ್ಲಿ ವಿದ್ಯಾರ್ಥಿಗಳು ದಾಖಲಾದಾಗ ಅಲ್ಲಿಗೂ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವ ಸಂಬಂಧ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದ ಅವರು, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶಾಲೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬುದಕ್ಕೆ ಬೇರೆ ಬೇರೆ ಕಾರಣಗಳಿವೆ. ಜನನ ಪ್ರಮಾಣ ಕಡಿಮೆ, ಸರ್ಕಾರವೇ ಹಣ ಕೊಟ್ಟು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿರುವ ಆರ್ಟಿಇ ಕಾಯ್ದೆಯಂತಹ ಕ್ರಮಗಳಿಂದಲೂ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ ಎಂದು ವಿವರಿಸಿದರು. ಆರ್ಟಿಇ ಕಾಯ್ದೆ ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪೋಷಕರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸುವ ಮೂಲಕ ದುರುಪಯೋಗ ತಡೆಗಟ್ಟಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು. ಆರ್ಟಿಇಗೆ ಒಳಪಡುವ ವಿದ್ಯಾರ್ಥಿಗಳ ಕುಟುಂಬ ಬಿಪಿಎಲ್ ಕಾರ್ಡ್ ಇರಬೇಕೆಂಬ ನಿಯಮ ಜಾರಿಗೆ ತರಬೇಕೆಂಬ ವಿಷಯ ಚರ್ಚೆಯಲ್ಲಿದೆ. ಸದ್ಯಕ್ಕೆ ಅದು ಸಾಧ್ಯವಾಗುವುದಿಲ್ಲ. ಮುಂದಿನ ವರ್ಷದಿಂದ ಇದು ಜಾರಿಯಾಗಲಿದೆ. ಒಂದನೆ ತರಗತಿಯಿಂದ ಪಿಯುಸಿವರೆಗೆ 17 ಸಾವಿರ ಶಿಕ್ಷಕರನ್ನು ನೇಮಕ ಮಾಡುವ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ. ಅದಕ್ಕೆ ಯಾವುದೇ ಅನುಮತಿ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

18ರೊಳಗೆ ಪಿಯು ಫಲಿತಾಂಶ:

ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡು ಈ ತಿಂಗಳ 18ರೊಳಗೆ ಫಲಿತಾಂಶ ಹೊರಬೀಳಲಿದ್ದು, ಎಸ್ಎಸ್ಎಲ್ಸಿ ಫಲಿತಾಂಶ ತಿಂಗಳಾಂತ್ಯದಲ್ಲಿ ಬರಲಿದೆ. ಸಿಇಟಿ ಫಲಿತಾಂಶ ಹೊರಬೀಳುವ ಮುನ್ನವೇ ಪಿಯುಸಿ ಫಲಿತಾಂಶ ನೀಡಲಾಗುವುದು. ಮೇ ಮೊದಲ ವಾರದಲ್ಲೇ ಫಲಿತಾಂಶ ನೀಡಲು ಸರ್ಕಾರ ಆಲೋಚಿಸಿತ್ತು. ಆದರೆ ರಸಾಯನಶಾಸ್ತ್ರ ಪತ್ರಿಕೆ ಸೋರಿಕೆ ಮತ್ತಿತರ ಕಾರಣಗಳಿಂದ ವಿಳಂಬವಾಗಿದ್ದು, ಈಗ ಯಾವುದೇ ತೊಂದರೆ ಇಲ್ಲದೆ ಫಲಿತಾಂಶ ಹೊರಬೀಳಲಿದೆ. ಸಿಇಟಿ ರ್ಯಾಂ ಕ್ ಹಾಗೂ ಇನ್ನಿತರ ಯಾವುದಕ್ಕೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟಣೆ ನಂತರ ಶಿಕ್ಷಕರ ವರ್ಗಾವಣೆಗೆ ಚಾಲನೆ ದೊರೆಯಲಿದೆ. ಈ ಬಾರಿಯೂ ನಿಯಮಾವಳಿಗಳಂತೆ ವರ್ಗಾವಣೆ ನಡೆಸಲಾಗುವುದು ಎಂದ ಅವರು, ಡಿಡಿಪಿಐ, ಬಿಇಒಗಳು ತಮ್ಮ ತವರೂರಲ್ಲಿ ಕೆಲಸ ಮಾಡುವ ಹಾಗಿಲ್ಲ. ಪತಿ-ಪತ್ನಿ ಶಿಕ್ಷಕರು ವರ್ಗಾವಣೆ ಕೋರಿರುವ 17 ಸಾವಿರ ಪ್ರಕರಣಗಳಿವೆ ಎಂದು ಹೇಳಿದರು. ಹೀಗಿರುವ ವರ್ಗಾವಣೆ ನಿಯಮಾವಳಿಗಳ ಬದಲಾವಣೆ ಅಗತ್ಯವಿದ್ದು, ಯಾವ ರೀತಿ ಬದಲಾವಣೆ ತರಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗುವುದು.

ಪಿಯುಸಿ ಉಪನ್ಯಾಸಕರು ಇಂಕ್ರಿಮೆಂಟ್ ಬೇಡ ಎಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾವು ಒಂದು ಇಂಕ್ರಿಮೆಂಟ್ ಇನ್ನು ಕೊಟ್ಟಿಲ್ಲ. ಬೇಡ ಎನ್ನುವ ಪ್ರಶ್ನೆ ಬರುವುದಿಲ್ಲ. ಪ್ರತಿಭಟನೆ ನಡೆಸುವಾಗ ಆವೇಶ ಇರುತ್ತದೆ. ಈಗಿನ ಪರಿಸ್ಥಿತಿಯೇ ಬೇರೆ. ಕುಮಾರ್ನಾಯಕ್ ವರದಿಯ ಬಹುಪಾಲನ್ನು ನಾವು ಅನುಷ್ಠಾನಕ್ಕೆ ತರುತ್ತೇವೆ ಎಂದರು. ಅವರು ಕೇಳಿದ ನಾಲ್ಕು ಇಂಕ್ರಿಮೆಂಟ್ಗಳಲ್ಲಿ ಒಂದು ಇಂಕ್ರಿಮೆಂಟ್ ನೀಡಲು ಸಮ್ಮತಿಸಿದ್ದೇವೆ. ಇದರಿಂದ ಪ್ರಾಂಶುಪಾಲರೊಬ್ಬರಿಗೆ ನೀಡುವ ವೇತನದಲ್ಲಿ ಹೆಚ್ಚುವರಿಯಾಗಿ 92 ಸಾವಿರ ರೂ. ಆಗಲಿದೆ. 42 ಸಾವಿರದಿಂದ 53 ಸಾವಿರಕ್ಕೆ ವೇತನ ಹೆಚ್ಚಳವಾಗಲಿದೆ. ಪ್ರಸ್ತುತ ಇರುವ 32 ಸಾವಿರದಿಂದ 37 ಸಾವಿರ ರೂ.ಗಳಿಗೆ ಅದರಂತೆ ಉಪನ್ಯಾಸಕರಿಗೆ 20 ರಿಂದ 25 ಸಾವಿರ ರೂ.ಗೆ ಒಂದು ಇಂಕ್ರಿಮೆಂಟ್ ನೀಡುವುದರಿಂದ ವೇತನ ಹೆಚ್ಚಳವಾಗಲಿದೆ.

ಪ್ರೌಢಶಾಲಾ ಶಿಕ್ಷಕರಿಗೆ 8900 ರಿಂದ 20,000 ರೂ.ಗೆ ಹೆಚ್ಚಳವಾಗಲಿದೆ ಈ ಇಂಕ್ರಿಮೆಂಟ್ಗಳು ಜೂ.1 ರಿಂದ ಅನ್ವಯವಾಗಲಿದೆ ಎಂದು ತಿಳಿಸಿದರು. ಅಂಗನವಾಡಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸುವ ಬಗ್ಗೆ ಕೇಂದ್ರಕ್ಕೆ ಈಗಾಗಲೇ ನಾಲ್ಕೈದು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದು ಜಾರಿಗೆ ಬಂದಿಲ್ಲ. ಅಂಗನವಾಡಿ ಶಿಕ್ಷಕಿಯರಿಗೆ ತರಬೇತಿ ನೀಡಿ ಇರುವ ಶೇ.50ರಷ್ಟು ಸೌಲಭ್ಯವನ್ನು ಬಳಸಿಕೊಂಡು ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸಲು ಚಿಂತನೆ ನಡೆಸಲಾಗಿದೆ.

Write A Comment