ಕರ್ನಾಟಕ

ಕೋಮಾವಸ್ಥೆ ತಲುಪಿದ್ದ ಲೋಕಾಯುಕ್ತಕ್ಕೆ ಆಕ್ಸಿಜನ್

Pinterest LinkedIn Tumblr

komaಲೋಕಾಯುಕ್ತಕ್ಕೆ ಮತ್ತೆ ಪವರ್ ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. ಲೋಕಾಯುಕ್ತ ಕೇಸ್‌ಗಳನ್ನು ಎಸಿಬಿಗೆ ವರ್ಗಾಯಿಸುವುದಕ್ಕೆ ತಡೆ ನೀಡಿ, ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರೇ ಮುಂದುವರಿಸಲಿ ಎಂದು ಹೈಕೋರ್ಟ್ ಆದೇಶ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಲೋಕಾಯುಕ್ತಕ್ಕಿದ್ದ ಪೊಲೀಸ್ ಪವರ್‌ನ್ನು ವಾಪಸ್ ನೀಡಲು ಮುಂದಾಗಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗಿದ್ದ ಅಧಿಕಾರವನ್ನು ಮೂರು ತಿಂಗಳ ಮಟ್ಟಿಗೆ ವಾಪಸ್ ನೀಡಲು ತೀರ್ಮಾನವಾಗಿದೆ. ಸುಮಾರು 600ಕ್ಕೂ ಹೆಚ್ಚು ಪ್ರಕರಣಗಳು ಲೋಕಾಯುಕ್ತದಲ್ಲಿದ್ದು, ಆ ತನಿಖೆಯನ್ನು ಲೋಕಾಯುಕ್ತ ಪೊಲೀಸರೇ ನಡೆಸಲಿದ್ದಾರೆ.

ಎಸಿಬಿ ರಚನೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿತ್ತು. ಎಸಿಬಿ ರಚನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ಕೂಡ ಸಿಎಂ ಸಿದ್ದರಾಮಯ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣವೇ ಎಸಿಬಿಯಲ್ಲಿ ಮೊದಲ ಪ್ರಕರಣವಾಗಿ ದಾಖಲಾಗಿತ್ತು. ಈಗ ಸರ್ಕಾರ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡುತ್ತಿದೆ.

ಈ ನಡುವೆ ಲೋಕಾಯುಕ್ತಕ್ಕೆ ಪೊಲೀಸ್ ಪವರ್ ವಾಪಸ್ ನೀಡಿದ ಬಳಿಕ ಹೊಸ ದೂರು ದಾಖಲು ಮಾಡಿಕೊಳ್ಳುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಎಸಿಬಿಯೇ ಹೊಸ ದೂರುಗಳನ್ನು ದಾಖಲೆ ಮಾಡಿಕೊಳ್ಳಬೇಕಾ? ಅಥವಾ ಲೋಕಾಯುಕ್ತವೇ ದೂರು ದಾಖಲು ಮಾಡಿಕೊಳ್ಳಬಹುದು ಎಂಬ ಗೊಂದಲಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ಮೂರು ತಿಂಗಳ ಒಳಗೆ 600ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಪೂರ್ಣಗೊಳಿಸಲು ಸಾಧ್ಯನಾ ಎಂಬ ಪ್ರಶ್ನೆಯೂ ಮೂಡಿದೆ. ಈ ವಿಚಾರವಾಗಿ ಕಾನೂನು ತಜ್ಞರ ಸಲಹೆ ಪಡೆಯಲು ಸರ್ಕಾರ ಮುಂದಾಗಿದೆ.

ಎಸಿಬಿಗೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದಿರಲು ತೀರ್ಮಾನ ಮಾಡಲಾಗಿದೆ.
ಒಟ್ಟಿನಲ್ಲಿ ಹೈಕೋರ್ಟ್ ಚಾಟಿಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಪ್ಲಾನ್ ಮಾಡಿದ್ದರೂ ಮೂರು ತಿಂಗಳ ನಂತರ ಲೋಕಾಯುಕ್ತ ಪೊಲೀಸ್ ಪವರ್ ಏನಾಗುತ್ತೆ? ಎಸಿಬಿ ಏನಾಗುತ್ತೆ ಅನ್ನೋದಕ್ಕೆ ಸ್ಪಷ್ಟತೆ ಇಲ್ಲದಿರೋದು ವಿಪರ್ಯಾಸವೇ ಸರಿ.

Write A Comment