ಕರ್ನಾಟಕ

ಸಾಮಾಜಿಕ ಜಾಲತಾಣಗಳ ಮೇಲೆ ಖಾಕಿ ಕಣ್ಣು

Pinterest LinkedIn Tumblr

faceಬೆಂಗಳೂರು, ಮೇ 2- ಸಾಮಾಜಿಕ ಜಾಲತಾಣ ಗಳ ಮೇಲೆ ನೇರ ನಿಗಾ ಇಡುವ ಅತ್ಯಾಧುನಿಕ ಸಲಕರಣೆಗಳನ್ನೊಳಗೊಂಡ ಕಮಾಂಡ್ ಸೆಂಟರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆರಂಭಿಸಲಾಗಿದೆ. ಈ ಕಮಾಂಡ್ ಸೆಂಟರ್ ಹೊರಾಂಗಣ ಮಾಧ್ಯಮ, ಸೋಷಿಯಲ್ ಮೀಡಿಯ, ಡಯಲ್ 100, ಹೊಯ್ಸಳ ನಿಯಂತ್ರಣ ವಿಭಾಗ, ಜಿಪಿಎಸ್ ಮತ್ತು ಮಾಧ್ಯಮ ನಿರ್ವಹಣಾ ವಿಭಾಗ ಒಳಗೊಂಡಂತೆ ಒಟ್ಟು ಐದು ವಿಭಾಗಗಳನ್ನು ಕೇಂದ್ರದಲ್ಲಿ ಆರಂಭಿಸಲಾಗಿದೆ. ಫೇಸ್ಬುಕ್, ಟ್ವಿಟರ್ನಂತಹ ಸಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ನೇರವಾಗಿ ನಿಗಾ ಇಡಲು ಅನುಮಾನಸ್ಪದ ವ್ಯಕ್ತಿಗಳ ಖಾತೆ ಬಗ್ಗೆ ಗಮನ ಇಡಲು, ಸಂದೇಶ ರವಾನೆಯಂತಹ ವಿಷಯಗಳನ್ನು ಪರಿಶೀಲಿಸಲು ಅದರಲ್ಲೂ ಪ್ರಮುಖವಾಗಿ ಸಮಾಜಘಾತುಕ ವ್ಯಕ್ತಿಗಳ ನಿಯಂತ್ರಣಕ್ಕೆ ಈ ನೂತನ ತಂತ್ರಜ್ಞಾನದಿಂದ ಸಾಧ್ಯವಾಗಲಿದೆ.

ಈವರೆಗೂ ಫೇಸ್ಬುಕ್, ಟ್ವಿಟರ್ನಂತಹ ಜಾಲ ತಾಣಗಳ ಬಗ್ಗೆ ನಿಗಾವಹಿಸಲು ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಇದನ್ನು ಸೈಬರ್ ಕ್ರೈಂ ವಿಭಾಗದವರೇ ನಿರ್ವಹಿಸುತ್ತಿದ್ದರು. ಅದರಲ್ಲೂ ಯಾರಾದರೂ ದೂರು ಕೊಟ್ಟ ನಂತರ ಅದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿತ್ತು. ಈ ಅತ್ಯಾಧುನಿಕ ತಂತ್ರಜ್ಞಾನದಿಂದ ನೇರವಾಗಿ ಅನುಮಾನಸ್ಪದ ವ್ಯಕ್ತಿಗಳು ಹಾಗೂ ಸಮಾಜಘಾತುಕ ವ್ಯಕ್ತಿಗಳ ತಾಣಗಳ ಮೇಲೆ ನಿಗಾ ಇಡಬಹುದಾಗಿದೆ.
ಸಿಟಿ ಸರ್ವೆಲೆನ್ಸ್ ಕ್ಯಾಮೆರಾಗಳನ್ನು 16 ಪೊಲೀಸ್ ಠಾಣೆಗಳಲ್ಲಿ 153 ಕಡೆ ಅಳವಡಿಸಿ 360 ಡಿಗ್ರಿ ಸಿಗುವಂತೆ ಈ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿದ್ದು, ಈ ಕಮಾಂಡ್ ಸೆಂಟರ್ಗೆ ಇದರ ಸಂಪರ್ಕ ಒದಗಿಸಲಾಗಿದೆ.
129 ಐಪಿ ಬುಲೆಟ್ ಕ್ಯಾಮೆರಾ 80 ಮೀಟರ್ ವ್ಯಾಪ್ತಿಯಲ್ಲಿ ನಿಗಾ ವಹಿಸುವ ಸಾಮರ್ಥ್ಯ ಹೊಂದಿದ್ದು, ಮತ್ತೊಂದು ಕ್ಯಾಮೆರಾ 150 ಮೀಟರ್ ವ್ಯಾಪ್ತಿಯಲ್ಲಿ 30ಎಲ್ಎಕ್ಸ್ ಝ್ಯೂಮ್ ಕೆಲಸ ನಿರ್ವಹಿಸಲಿದೆ. ಇದನ್ನು 9.4 ಕೋಟಿ ರೂ. ವೆಚ್ಚದಲ್ಲಿ ಜಿಪಿಎಸ್ ಯೂನಿಟನ್ನು 57 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗಿದೆ.

ಡಯಲ್ 100 ವಿಭಾಗದಲ್ಲಿ ಕರೆ ಸ್ವೀಕರಿಸುವ ಹಾಗೂ ವಿಲೇವಾರಿ ಮಾಡುವ ನಾಲ್ಕು ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಸಾಮಾಜಿಕ ಜಾಲತಾಣ, ದೂರವಾಣಿ, ಎಸ್ಎಂಎಸ್ಗಳ ಮೂಲಕವೂ ದೂರು ನೀಡಲು ಸಾಧ್ಯವಾಗಲಿದೆ. ದೂರು ಸ್ವೀಕರಿಸಿದ ನಂತರ ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನಿಸಲಿದ್ದು, ಯಾವುದೇ ಅಹಿತಕರ ಘಟನೆ ಅಥವಾ ಘಟನೆಗೆ ಸಂಬಂಧಿಸಿದಂತೆ ಧ್ವನಿಮುದ್ರಿತ ವ್ಯವಸ್ಥೆಯೂ ಇದರಲ್ಲಿ ಒಳಗೊಂಡಿದ್ದು, ಇದು ಕಂಟ್ರೋಲ್ ರೂಂಗೆ ನೇರವಾಗಿ ರವಾನೆಯಾಗಲಿದೆ. 2011ರಲ್ಲಿ ಸಾಮಾಜಿಕ ಜಾಲತಾಣಗಳು ಆರಂಭಗೊಂಡಿದ್ದು, 2013ರಲ್ಲಿ ಟ್ವಿಟರ್ ಆರಂಭವಾಗಿದೆ. 3.12ಲಕ್ಷ ಫಾಲೋಯರ್ಸ್ಟ ಇದ್ದಾರೆ. ಪ್ರತೀ ದಿನ ಪೊಲೀಸ್ ಆಯುಕ್ತರ ಈ ಖಾತೆಗೆ 25ರಿಂದ 30 ದೂರುಗಳು ಬರುತ್ತಿವೆ. 2012ರಲ್ಲಿ ಫೇಸ್ಬುಕ್ ಆರಂಭವಾಗಿದ್ದು, ಆ ಮೂಲಕವೂ ಪ್ರತಿದಿನ ಸುಮಾರು 30 ದೂರುಗಳು ದಾಖಲಾಗುತ್ತಿವೆ. ಈ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಲು ಅತ್ಯಾಧುನಿಕ ಕಮಾಂಡರ್ ಕೇಂದ್ರ ಸಜ್ಜಾಗಿದೆ. ಇಂದು ಈ ಕೇಂದ್ರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದ್ದಾರೆ.

Write A Comment