ಕರ್ನಾಟಕ

17 ಸಾವಿರ ಶಿಕ್ಷಕರ ನೇಮಕ : ಜುಲೈ ಒಳಗೆ ವರ್ಗಾವಣೆ ಪೂರ್ಣ

Pinterest LinkedIn Tumblr

teacher-cartoon

ಬೆಂಗಳೂರು, ಮೇ ೨ – ರಾಜ್ಯದಲ್ಲಿ ಹೊಸದಾಗಿ 17 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಪ್ರದೇಶ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1ನೇ ತರಗತಿಯಿಂದ ಪಿಯುಸಿಯವರೆಗೆ ಸುಮಾರು 17 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧರಿಸಲಾಗಿದೆ. ಆರ್ಥಿಕ ಇಲಾಖೆಯಿಂದ ಒಪ್ಪಿಗೆ ದೊರೆತ ತಕ್ಷಣವೇ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿದೆ ಎಂದರು.
ತವರು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಇಓ ಮತ್ತು ಬಿಡಿಪಿಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಗಿದ್ದು, ಜೂನ್ ತಿಂಗಳು ಪೂರ್ಣವಾಗುವುದರೊಳಗೆ ಈ ವರ್ಗಾವಣೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಶಿಕ್ಷಕರ ವರ್ಗಾವಣೆಯನ್ನು ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಸಮವಸ್ತ್ರ ಪೂರೈಕೆ
ರಾಜ್ಯದ ಎಲ್ಲಾ ಶಾಲೆಗಳಿಗೆ ಜೂನ್ 1ರ ವೇಳೆಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುವುದು ಈಗಾಗಲೇ ಶೇ. 71ರಷ್ಟು ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಶಾಲೆಗೆ ಹಂಚಿಕೆ ಮಾಡಲಾಗಿದೆ ಎಂದರು.
ಹೆಣ್ಣುಮಕ್ಕಳಿಗೆ ಚೂಡಿದಾರ್ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಈಗಿರುವ ಸಮವಸ್ತ್ರಗಳನ್ನು ಮುಂದುವರೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಆರ್‌ಟಿಇ ಶಾಲಾ ದಾಖಲಾತಿ ಸಂದರ್ಭದಲ್ಲಿ ಎಪಿಕ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಆದಾರವಾಗಿಟ್ಟುಕೊಂಡು ಅರ್ಜಿ ಪಡೆಯಲಾಗಿದೆ. ಆಗುತ್ತಿರುವ ದುರುಪಯೋಗವನ್ನು ತಪ್ಪಿಸಲು ಬರುವ ವರ್ಷದಿಂದ ಆಧಾರ್ ಕಾರ್ಡ್‌ನ್ನು ಖಡ್ಡಾಯ ಮಾಡಲಾಗುವುದು ಎಂದು ಅವರು ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆ
ಸಿಇಟಿಗೂ ಮೊದಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಯಾವುದೇ ಕಾರಣಕ್ಕೂ ಸಿಇಟಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಸಿಇಟಿಗೂ ಮೊದಲೇ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಎಲ್ಲೂ ಕನ್ನಡ ಶಾಲೆಗಳನ್ನು ಮುಚ್ಚುತ್ತಿಲ್ಲ ಎಂದು ಅವರು ಹೇಳಿದರು.
1ನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಖಡ್ಡಾಯ ವಿಚಾರದಲ್ಲಿ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ. ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ಬೇಕಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣದ ನೀತಿಯನ್ನು ಅಳವಡಿಸಿಕೊಳ್ಳಲು ಪಠ್ಯಪುಸ್ತಕಗಳ ಪರಿಷ್ಕರಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಪಿಯುಸಿ ಹಂತದಲ್ಲಿ ಇದು ಜಾರಿಯಾಗಿದೆ. 8ನೇ ತರಗತಿಯಿಂದ ಇದನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದರು.

Write A Comment