ರಾಷ್ಟ್ರೀಯ

ವರ್ಷದೊಳಗೆ ಮಹಾದಾಯಿ ಪ್ರಕರಣಕ್ಕೆ ಮೋಕ್ಷ

Pinterest LinkedIn Tumblr

judge-hammer

ನವದೆಹಲಿ, ಮೇ ೨- ಮಹಾದಾಯಿ ಜಲ ವಿವಾದದ ಮೂಲ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಬೇಕೆಂದು ರಾಜ್ಯ ಸರ್ಕಾರ ನ್ಯಾಯಾಧೀಕರಣಕ್ಕೆ ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿರುವ ನ್ಯಾಯಾಧೀಕರಣ ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ಪೀಠ ಇಂದು ವಿಚಾರಣೆ ನಡೆಸಿ 1 ವರ್ಷದೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವ ಭರವಸೆ ನೀಡಿದೆ.
ಈ ಹಿಂದೆ ರಾಜ್ಯ ಸರ್ಕಾರ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಬೇಕೆಂದು ನ್ಯಾಯಾಧೀಕರಣಕ್ಕೆ ಪತ್ರ ಬರೆದಾಗ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ಅವರು ಪತ್ರವನ್ನು ವಾಪಸ್ ಪಡೆಯುವಂತೆ ಆದೇಶಿಸಿದ್ದರು. ಆದರೆ ಸರ್ಕಾರ ಮತ್ತೆ ರಾಜ್ಯದ ಪರ ಅಡ್ವೊಕೇಟ್ ಆನ್ ರಿಕಾರ್ಡ್ ಆಗಿರುವ ನಿಶಾಂತ್ ಪಾಟೀಲ್ ಮೂಲಕ ನ್ಯಾಯಾಧೀಕರಣಕ್ಕೆ ಧಾರವಾಡ, ಹುಬ್ಬಳ್ಳಿ, ಗದಗ, ಬೆಳಗಾವಿ ಸೇರಿ ಹಲವೆಡೆ ನೀರಿನ ಅಭಾವ ಹೆಚ್ಚಿದ್ದು ಜನರು ನೀರಿಲ್ಲದೆ ಬಳಲುತ್ತಿದ್ದಾರೆ. ಮುಂದಿನ ವರ್ಷ ಕೂಡ ಬರಗಾಲ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಪ್ರಕರಣವನ್ನು ಪೂರ್ಣಗೊಳಿಸಿ ರಾಜ್ಯಗಳಿಗೆ ನ್ಯಾಯ ಒದಗಿಸಬೇಕೆಂದು ಮತ್ತೊಮ್ಮೆ ವಿನಮ್ರ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ಕುರಿತಂತೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಸ್. ಪಂಚಾಲ್ ಅವರ ನೇತೃತ್ವದ ಪೀಠ ರಾಜ್ಯ ಸರ್ಕಾರದ ಅರ್ಜಿಗೆ ಸ್ಪಂದಿಸಿ ಒಂದು ವರ್ಷದೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವ ಭರವಸೆ ನೀಡಿತು. ಅಲ್ಲದೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಒಂದು ವಾರದೊಳಗೆ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸುವಂತೆ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿ ಪೀಠ ಆದೇಶಿಸಿತು. ಇದರಿಂದ ಮಹಾದಾಯಿ ಪ್ರಕರಣ ಶೀಘ್ರ ಬಗೆಹರಿಯುವ ಲಕ್ಷಣಗಳು ಗೋಚರವಾಗಿವೆ.

Write A Comment