ಕರ್ನಾಟಕ

ಕೇಂದ್ರಕ್ಕೆ ರಾಜ್ಯ ಮೊರೆ : ಪ್ರಧಾನಿ ಬಳಿಗೆ ನಿಯೋಗ ಒಯ್ಯಲು ನಿರ್ಧಾರ

Pinterest LinkedIn Tumblr

2bellary2ಬೆಂಗಳೂರು, ಮೇ. ೨ – ರಾಜ್ಯದ ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಒದಗಿಸುವಂತೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗೆ ನೆರವು ನೀಡಿದೆ. ತೀವ್ರ ಬರ ಇರುವುದರಿಂದ ಹೆಚ್ಚಿನ ನೆರವು ನೀಡುವಂತೆ ಮತ್ತೊಮ್ಮೆ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.
ರಾಜಭವನದಲ್ಲಿಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂಗಾರು ಮಳೆ ವೈಫಲ್ಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 1473 ಕೋಟಿ ರೂ.ಗಳನ್ನು ಹಿಂಗಾರು ಮಳೆ ವೈಫಲ್ಯದ ಹಿನ್ನೆಲೆಯಲ್ಲಿ 723 ಕೋಟಿ ರೂ.ಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ ಎಂದರು.
ಬರ ಕಾಮಗಾರಿಗಳಿಗೆ ಹೆಚ್ಚಿನ ಹಣದ ಅಗತ್ಯ ಇರುವುದರಿಂದ ಮತ್ತಷ್ಟು ಹಣ ನೀಡುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.
ಬರ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜಕಾರಣ ಮಾಡುತ್ತಿದ್ದಾರೆ. ನಾವೇನೂ ಕಾಟಾಚಾರಕ್ಕೆ ಬರ ಅಧ್ಯಯನ ನಡೆಸುತ್ತಿಲ್ಲ, ಯಡಿಯೂರಪ್ಪನವರಿಗೆ ಮಾಹಿತಿ ಕೊರತೆ ಇದೆ. ಸರಿಯಾಗಿ ತಿಳಿದುಕೊಂಡು ಮಾತನಾಡಲಿ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಬರ ಅಧ್ಯಯನಕ್ಕೆ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಗಳು ಈಗಾಗಲೇ ಒಂದು ವರದಿಯನ್ನು ನೀಡಿವೆ ಅದನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಪೂರ್ಣ ಪ್ರಮಾಣದ ವರದಿಯನ್ನು ಈ ಸಮಿತಿಗಳು ಸದ್ಯದಲ್ಲೇ ನೀಡಲಿವೆ ಎಂದರು.
ಬರ ಪರಿಹಾರ ಕಾಮಗಾರಿಗಳಿಗೆ ಬಳಕೆಯಾಗದೇ ಉಳಿದಿರುವ ಹಣವನ್ನು ವಾಪಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿಲ್ಲ, ಬಳಕೆಯಾಗದ ಹಣವನ್ನು ಬೇರೆ ಜಿಲ್ಲೆಗಳಿಗೆ ಹಂಚಿಕೆ ಮಾಡಲು ಹಣ ಮರಳಿಸುವಂತೆ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಹದಾಯಿ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯಪಾಲರಿಗೆ ಸೇರಿದ್ದು
ಮಾಹಿತಿ ಆಯುಕ್ತರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆರಾಜಭವಕ್ಕೆ ಮಾಧ್ಯಮದವರ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಇದು ರಾಜ್ಯಪಾಲರಿಗೆ ಸೇರಿದ್ದು, ತಾವೇನೂ ಈ ಬಗ್ಗೆ ಹೇಳಲಾಗದು ಎಂದರು.
ಪ್ರಮಾಣ ವಚನ
ರಾಜ್ಯದ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ನರಸಿಂಹ ರಾಜು, ಪ್ರಮಾಣ ವಚನ ಸ್ವೀಕರಿಸಿದರು.
ರಾಜ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯುಪಾಲ ವಜುಬಾಯಿ ರೂಢಾಬಾಯಿ ವಾಲಾ ನೂತನ ಮಾಹಿತಿ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಿದರು.
ಈ ಸಮಾರಂಭದ ವರದಿಗೆ ತೆರಳಿದ ಮಾಧ್ಯಮದ ವರದಿಗಾರರು ಹಾಗಹೂ ಛಾಯಾಗ್ರಾಹಕರಿಗೆ ರಾಜಭವನದ ಪ್ರವೇಶ ನಿರ್ಬಂಧಿಸಿದ್ದು ಅಚ್ಚರಿಗೆ ಕಾರಣವಾಯಿತು.
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ರಾಜಭವನಕ್ಕೆ ಮಾಧ್ಯಮದವರಿಗೆ ಮುಕ್ತ ಪ್ರವೇಶ ಇರುತ್ತದೆ. ಆದರೆ, ಈ ಬಾರಿ ಮಾಧ್ಯಮದವರನ್ನು ದೂರ ಇಟ್ಟು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಡೆಸಲಾಗಿದೆ.

Write A Comment