ಮನೋರಂಜನೆ

ಅಜೇಯ್‌ಗೆ ಮತ್ತೊಂದು ಚಾನ್ಸ್‌ ಸಿಕ್ತು

Pinterest LinkedIn Tumblr

ajay-raoಇತ್ತೀಚೆಗಷ್ಟೇ ಅಜೇಯ್‌ ರಾವ್‌ “ಜಾನ್‌ ಜಾನಿ ಜನಾರ್ಧನ್‌’ ಎಂಬ ಚಿತ್ರಕ್ಕೆ ಮೂವರು ಹೀರೋಗಳಲ್ಲಿ ಒಬ್ಬರು ಎಂಬ
ಸುದ್ದಿ ಇದೇ “ಬಾಲ್ಕನಿ’ಯಲ್ಲಿ ಬಂದಿತ್ತು. ಈಗ ಅಜೇಯ್‌ ಮತ್ತೂಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ
ಚಿತ್ರಕ್ಕೆ ಶಿವತೇಜಸ್‌ ನಿರ್ದೇಶಕರು. “ನೆನಪಿರಲಿ’ ಪ್ರೇಮ್‌ ಅಭಿನಯದ “ಮಳೆ’ ಚಿತ್ರದ ಬಳಿಕ ಶಿವತೇಜಸ್‌ ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಕಥೆ, ಚಿತ್ರಕಥೆ ಹಾಗು ಸಂಭಾಷಣೆಯ ಜವಾಬ್ದಾರಿಯನ್ನು ಶಿವತೇಜಸ್‌ ಅವರೇ ವಹಿಸಿಕೊಂಡಿದ್ದಾರೆ. “ಮಳೆ’ ಬಳಿಕ ಒಂದಷ್ಟು ಕಥೆಗಳನ್ನು ಹೆಣೆಯುತ್ತ ಕೂತಿದ್ದ ಶಿವತೇಜಸ್‌, ಈ ಬಾರಿ
ಪಕ್ಕಾ ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗು ಸೆಂಟಿಮೆಂಟ್ ಕಥೆ ಹೆಣೆದು, ನಿರ್ದೇಶನಕ್ಕೆ ಅಣಿಯಾಗಿದ್ದಾರೆ.

ಅಜೇಯ್‌ ರಾವ್‌ ಕಥೆ ಮತ್ತು ಪಾತ್ರಕ್ಕೆ ಸರಿಹೊಂದುತ್ತಾರೆ ಎಂಬ ಕಾರಣಕ್ಕೆ, ಅವರಿಗೆ ಕಥೆ ಬಗ್ಗೆ ವಿವರಿಸಿ, ಅಂತಿಮವಾಗಿ ಅವರ ನಾಯಕತ್ವದಲ್ಲಿ ಸಿನಿಮಾ ಶುರುಮಾಡೋಕೆ ರೆಡಿಯಾಗಿದ್ದಾರೆ ಶಿವತೇಜಸ್‌.

ಈ ಚಿತ್ರಕ್ಕೆ ಡಾ.ರಾಜು ನಿರ್ಮಾಪಕರು. ಇವರಿಗೆ ಇದು ಮೊದಲ ಸಿನಿಮಾ. ನಿರ್ಮಾಪಕರೆನಿಸಿಕೊಳ್ಳಬೇಕೆಂಬ ಅವರ ಆಸೆ ಅಜೇಯ್‌ ರಾವ್‌ ಚಿತ್ರದ ಮೂಲಕ ಈಡೇರುತ್ತಿದೆಯಂತೆ. ಇನ್ನು, ಚಿತ್ರಕ್ಕೆ ಶೀರ್ಷಿಕೆ ಅಂತಿಮಗೊಂಡಿಲ್ಲ. ಆದರೂ, ಚಿತ್ರತಂಡ ಒಂದೆರೆಡು ಶೀರ್ಷಿಕೆಗಳನ್ನು ಅಂದುಕೊಂಡಿದ್ದು, ಇಷ್ಟರಲ್ಲೇ ಟೈಟಲ್‌ ಪಕ್ಕಾ ಆಗಲಿದೆಯಂತೆ. ಈಗಾಗಲೇ “ಉಗ್ರಂ’, “ಜ್ವಲಂತಂ’, “ಶ್ರೀಚಕ್ರಂ’ ಎಂಬಂತಹ ಶೀರ್ಷಿಕೆ ಇಟ್ಟುಕೊಂಡ ಚಿತ್ರಗಳು ಬಂದಿವೆ. ಅಜೇಯ್‌ ರಾವ್‌ ಅಭಿನಯದ ಈ ಚಿತ್ರಕ್ಕೆ “ಶೀಘ್ರಂ’, “ವಿಶ್ವಂ’, “ದಂಡಂ’, “ಧೈರ್ಯಂ’ ಹೀಗೆ ಒಂದಷ್ಟು ಹೆಸರುಗಳನ್ನಿಟ್ಟರೂ ಅಚ್ಚರಿ ಇಲ್ಲ. ಆದರೂ ಶೀರ್ಷಿಕೆ ಫೈನಲ್‌ ಆಗುವವರೆಗೆ ಕಾಯಲೇಬೇಕು. ಇನ್ನು, ಚಿತ್ರಕ್ಕೆ ನಾಯಕಿ ಹಾಗೂ ಉಳಿದ ಕಲಾವಿದರ ಬಳಗದ ಆಯ್ಕೆಯಾಗಿಲ್ಲ. ಶೇಖರ್‌ ಚಂದ್ರ ಕ್ಯಾಮೆರಾ ಹಿಡಿದರೆ, ಎಮಿಲ್‌ ಅವರಿಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್‌ ಕತ್ತರಿ ಹಿಡಿದರೆ, ರವಿವರ್ಮ ಸ್ಟಂಟ್‌ ಮಾಡಿಸಲಿದ್ದಾರೆ.

ಬಹುತೇಕ ಬೆಂಗಳೂರು ಹಾಗು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಹಾಡುಗಳಿಗಾಗಿ ಹೊರಗಡೆ
ಹೋಗುವ ಸಾಧ್ಯತೆ ಇದೆ ಎಂಬುದು ನಿರ್ದೇಶಕರ ಹೇಳಿಕೆ. ಸದ್ಯಕ್ಕೆ ಅಜೇಯ್‌ ರಾವ್‌ ಅವರು ಮಲಯಾಳಂನ ರಿಮೇಕ್‌ ನ “ಜಾನ್‌ ಜಾನಿ ಜನಾರ್ಧನ್‌’ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಬಳಿಕ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಅಂತಿಮ ಇಲ್ಲವೇ ಆಗಸ್ಟ್ ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.
-ಉದಯವಾಣಿ

Write A Comment