ಕರ್ನಾಟಕ

ಬೇಸಿಗೆ ಶಿಬಿರದಲ್ಲಿ ಮಕ್ಕಳ ಸಂಭ್ರಮ: ಪ್ರದರ್ಶನದಲ್ಲಿ ತರಹೇವಾರಿ ರೋಬೊ

Pinterest LinkedIn Tumblr

pvec1may16aROBO 02ಬೆಂಗಳೂರು: ಅಲ್ಲಿ ರೋಬೊಗಳ ಮಿನಿ ಲೋಕ ಸೃಷ್ಟಿಯಾಗಿತ್ತು. ನೆರೆದಿದ್ದ ಮಕ್ಕಳೆಲ್ಲ ತರಹೇವಾರಿ ರೋಬೊಗಳ ಕಾರ್ಯವೈಖರಿ ಕಂಡು ಖುಷಿಪಟ್ಟರು. ‘ದಿ ಮುಸ್ಲಿಮ್‌ ಆರ್ಫನೇಜ್‌ ಸಂಸ್ಥೆ’ ಬೇಸಿಗೆ ಶಿಬಿರದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ರೋಬೊಟಿಕ್‌್ ಪ್ರದರ್ಶನ’ದಲ್ಲಿ ಕಂಡುಬಂದ ದೃಶ್ಯಗಳಿವು.

ಬೇಸಿಗೆ ಶಿಬಿರದಲ್ಲಿ ರೋಬೊಟಿಕ್‌ ತಜ್ಞರು, ಮಕ್ಕಳಿಗೆ ಹಲವು ದಿನಗಳ ಕಾಲ ರೋಬೊಗಳ ತಯಾರಿ ಹಾಗೂ ಅವುಗಳ ನಿರ್ವಹಣೆ ಕುರಿತು ತರಬೇತಿ ನೀಡಿದ್ದಾರೆ. ತರಬೇತಿ ವೇಳೆ ತಜ್ಞರು ಹಾಗೂ ಮಕ್ಕಳು ಸಿದ್ಧಪಡಿಸಿದ್ದ ರೋಬೊಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.

ವಾಣಿಜ್ಯ, ಭದ್ರತೆ, ಮನರಂಜನೆ, ಇತರೆ ಕ್ಷೇತ್ರಗಳಿಗಾಗಿ ವಿನ್ಯಾಸಪಡಿಸಿದ್ದ ರೋಬೊಗಳು ಪ್ರದರ್ಶನದಲ್ಲಿದ್ದವು. ಬಹುಮಹಡಿ ಕಟ್ಟಡಗಳಲ್ಲಿರುವ ಶಾಪಿಂಗ್‌ ಮಾಲ್‌ಗಳಲ್ಲಿ ಕಾರ್ಯ ನಿರ್ವಹಿಸಬಹುದಾದ ಗ್ರಾಹಕಸ್ನೇಹಿ ‘ಟ್ರಾಲಿ ರೋಬೊ’ ಪ್ರದರ್ಶನದ ಕೇಂದ್ರಬಿಂದುವಾಗಿತ್ತು.

‘ಟ್ರಾಲಿ  ವಿನ್ಯಾಸದಲ್ಲಿರುವ ರೋಬೊ, 5ರಿಂದ 10 ಕೆ.ಜಿ. ತೂಕದ ಸಾಮಗ್ರಿ ಸಾಗಿಸುವ ಸಾಮರ್ಥ್ಯ ಹೊಂದಿದೆ. ನಾಲ್ಕು ಚಕ್ರಗಳು ಇದಕ್ಕಿದೆ. ವಿದೇಶಗಳಲ್ಲಿ ಇದರ ಬಳಕೆ ಹೆಚ್ಚಿದ್ದು, ಭಾರತ ಅದರಲ್ಲೂ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಟ್ರಾಲಿ ರೋಬೊಗೆ ಬೇಡಿಕೆ ಬರಲಿದೆ’ ಎಂದು ತಜ್ಞರು ವಿವರಿಸಿದರು.

ರಕ್ಷಣೆ ಕ್ಷೇತ್ರದ ಬಳಕೆಗೆ  ಎಕ್ಸಪ್ಲೋರರ್‌, ಕ್ವಾಡ್‌ ಕ್ಯಾಪ್ಟರ್‌, ಕಂಟ್ರೋಲರ್‌ ರೋಬೊಗಳು ಸಹ ಪ್ರದರ್ಶನದಲ್ಲಿ ಕಂಡುಬಂದವು.
ತಜ್ಞರು ನೀಡಿದ್ದ ಬಿಡಿ ಭಾಗಗಳನ್ನು ಬಳಸಿ ಮಕ್ಕಳೇ ಸಿದ್ಧಪಡಿಸಿದ್ದ ರೋಬೊಗಳು ಸಹ ತಮ್ಮ ಕಾರ್ಯವೈಖರಿಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.

‘ರೋಬೊ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಕಲಿಯುವ ಅವಕಾಶ ಸಿಕ್ಕಿರಲಿಲ್ಲ. ಈಗ ರಜೆಯಲ್ಲಿ ಶಿಬಿರಕ್ಕೆ ಬಂದು ರೋಬೊ ಬಗ್ಗೆ ತಿಳಿದುಕೊಂಡಿದ್ದೇನೆ. ಖುಷಿಯಾಗುತ್ತಿದೆ’ ಎಂದು 6ನೇ ತರಗತಿಯ ಎಸ್‌. ಮಹಮ್ಮದ್‌ ಅನಿಸಿಕೆ ಹಂಚಿಕೊಂಡರು.

‘ಖುದ್ದು ನಾನೇ ಸಿದ್ಧಪಡಿಸಿದ ರೋಬೊ ಪ್ರದರ್ಶನದಲ್ಲಿದೆ. ಅದನ್ನು ವೀಕ್ಷಿಸಿದವರು ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಇಂತಹ ಮತ್ತಷ್ಟು ರೋಬೊಗಳನ್ನು ಮುಂದಿನ ದಿನಗಳಲ್ಲಿ ಸಿದ್ಧಪಡಿಸುವ ಕನಸು ಇದೆ’ ಎಂದು 5ನೇ ತರಗತಿಯ ರೆಹಮಾನ್‌ ತಿಳಿಸಿದರು.

Write A Comment