ಮನೋರಂಜನೆ

ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್‌ಗೆ ಗೆಲುವು

Pinterest LinkedIn Tumblr

david-warner

ಹೈದರಾಬಾದ್‌: ಪಂದ್ಯ ಆರಂಭಕ್ಕೂ ಮೊದಲು ಮಳೆ ಸುರಿಯಿತು. ನಂತರ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್‌ ಸುರಿಸಿದ ರನ್ ಮಳೆಯಲ್ಲಿ ಅಭಿಮಾನಿಗಳು ತೋಯ್ದು ಹೋದರು. ಇದರಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು 15ರನ್‌ಗಳ ಗೆಲುವು ಗಳಿಸಿತು.

ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಆತಿಥೇಯ ಸನ್‌ರೈಸರ್ಸ್‌ 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 194 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರಿನ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 179ರನ್‌ ಪೇರಿಸಲಷ್ಟೇ ಶಕ್ತವಾಯಿತು.

ಅಬ್ಬರ: ಉತ್ತಮ ಲಯದಲ್ಲಿರುವ ಆಸ್ಟ್ರೇಲಿಯಾದ ವಾರ್ನರ್‌ ಆರಂಭ ದಿಂದಲೇ ಆಕ್ರಮಣಕಾರಿ ಆಟ ಆಡಿ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. ಸೊಗಸಾದ ಇನಿಂಗ್ಸ್‌ ಕಟ್ಟಿದ ಅವರು ಕೇವಲ 50 ಎಸೆತಗಳಲ್ಲಿ 92 ರನ್ ಕಲೆ ಹಾಕಿದರು.

ಬೌಂಡರಿ (9) ಮತ್ತು ಸಿಕ್ಸರ್‌ಗಳ (5) ಮೂಲಕವೇ 66 ರನ್ ಬಾರಿಸಿದ್ದು ಅವರ ಆಟದ ವಿಶೇಷ. ಇವರ ಆಟಕ್ಕೆ ವಿಲಿಯಮ್ಸನ್‌ (50; 38ಎ, 7ಬೌಂ) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 73 ಎಸೆತಗಳಲ್ಲಿ 124 ರನ್ ಗಳಿಸಿತು.

ಪಂದ್ಯಕ್ಕೂ ಮೊದಲು ಮಳೆಯಲ್ಲಿ ಕೊಂಚ ತೊಯ್ದು ಖುಷಿಯಲ್ಲಿದ್ದ ಕ್ರಿಕೆಟ್‌ ಪ್ರೇಮಿಗಳಿಗೆ ವಾರ್ನರ್‌ ಮತ್ತು ವಿಲಿಯ ಮ್ಸನ್‌ ಆಟ ಮತ್ತಷ್ಟು ಮುದ ನೀಡಿತು.

ಶಿಖರ್ ಧವನ್ 11 ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದರು. ನಂತರ ವಾರ್ನರ್ ಮತ್ತು ವಿಲಿಯಮ್ಸನ್‌ ಅಬ್ಬರ ಶುರುವಾಯಿತು. ಆತಿಥೇಯ ತಂಡ ಮೊದಲ ಹತ್ತು ಓವರ್‌ಗಳು ಪೂರ್ಣ ಗೊಂಡಾಗ 82 ರನ್ ಗಳಿಸಿತ್ತು. ಕೊನೆಯ ಹತ್ತು ಓವರ್‌ಗಳಲ್ಲಿ 112 ರನ್ ಬಂದವು.

ನಿರಾಸೆ ಮೂಡಿಸಿದ ಕೊಹ್ಲಿ: ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಮಿಂಚಿದ್ದ ನಾಯಕ ವಿರಾಟ್‌ ಕೊಹ್ಲಿ (14) ಮುಸ್ತಾಫಿಜುರ್‌ ರಹಮಾನ್‌ಗೆ ವಿಕೆಟ್‌ ಒಪ್ಪಿಸಿ ನಿರಾಸೆ ಮೂಡಿಸಿದರು.

ಆದರೆ ಕರ್ನಾಟಕದ ಕೆ.ಎಲ್‌. ರಾಹುಲ್‌ ಕೆಚ್ಚೆದೆಯ ಆಟ ಆಡಿದರು. ಕ್ರಿಸ್‌ ಗೇಲ್ ಬದಲು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದ ರಾಹುಲ್‌ 28 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 51ರನ್‌ ಗಳಿಸಿ ಮಿಂಚಿದರು. ಇವರಿಗೆ ಡಿವಿಲಿಯರ್ಸ್‌ (47; 32ಎ, 3ಬೌಂ, 2ಸಿ.) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 4.4 ಓವರ್‌ಗಳಲ್ಲಿ 41ರನ್‌ ಪೇರಿಸಿ ಭರವಸೆ ಮೂಡಿಸಿತ್ತು.

ಇವರಿಬ್ಬರ ವಿಕೆಟ್‌ ಪತನದ ಬಳಿಕ ತಂಡ ಕುಸಿತದ ಹಾದಿ ಹಿಡಿಯಿತು. ಕೊನೆಯಲ್ಲಿ ಸಚಿನ್‌ ಬೇಬಿ (27; 16ಎ, 3ಬೌಂ, 1ಸಿ) ಮತ್ತು ಕೇದಾರ್‌ ಜಾಧವ್‌ (ಔಟಾಗದೆ 25 ;15ಎ, 2ಸಿ.) ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಉಭಯ ತಂಡಗಳು ಬೆಂಗಳೂರಿ ನಲ್ಲಿ ನಡೆದ ಪಂದ್ಯದಲ್ಲಿ ಮುಖಾಮುಖಿ ಯಾಗಿದ್ದವು. ಆಗ ಆರ್‌ಸಿಬಿ ಗೆಲುವು ಸಾಧಿಸಿತ್ತು.

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್ ಹೈದರಾಬಾದ್‌ 5 ಕ್ಕೆ 194 (20 ಓವರ್‌ಗಳಲ್ಲಿ)

ಡೇವಿಡ್ ವಾರ್ನರ್‌ ಸಿ. ಡಿವಿಲಿಯರ್ಸ್‌ ಬಿ. ತಬ್ರೈಜ್‌ ಶಂಶಿ 92
ಶಿಖರ್ ಧವನ್‌ ಸಿ ಮತ್ತು ಬಿ ಕೇನ್‌ ರಿಚರ್ಡ್‌ಸನ್‌ 11
ಕೇನ್‌ ವಿಲಿಯಮ್ಸನ್‌ ಸಿ. ರಾಹುಲ್‌ ಬಿ. ಶೇನ್ ವ್ಯಾಟ್ಸನ್‌ 50
ಮೊಯ್ಸಿಸ್‌ ಹೆನ್ರಿಕ್ಸ್ ಔಟಾಗದೆ 31
ನಮನ್ ಓಜಾ ಸಿ. ಡಿವಿಲಿಯರ್ಸ್‌ ಬಿ. ಕೇನ್‌ ರಿಚರ್ಡ್‌ಸನ್‌ 01
ದೀಪಕ್ ಹೂಡಾ ರನ್ ಔಟ್‌ (ರಿಚರ್ಡ್‌ಸನ್‌/ರಾಹುಲ್‌) 02
ಆಶಿಶ್ ರೆಡ್ಡಿ ಔಟಾಗದೆ 02

ಇತರೆ: (ಲೆಗ್ ಬೈ–1, ವೈಡ್‌–3, ನೋ ಬಾಲ್‌–1) 05
ವಿಕೆಟ್‌ ಪತನ: 1–28 (ಧವನ್; 3.4), 2–152 (ವಾರ್ನರ್‌; 15.5), 3–160 (ವಿಲಿಯಮ್ಸನ್‌; 16.5), 4–161 (ಓಜಾ; 17.2), 5–190 (ಹೂಡಾ; 19.1)

ಬೌಲಿಂಗ್‌: ಕೇನ್ ರಿಚರ್ಡ್‌ಸನ್‌ 4–0–45–2, ಶೇನ್ ವ್ಯಾಟ್ಸನ್‌ 4–0–33–1, ಪರ್ವೇಜ್‌ ರಸೂಲ್‌ 4–0–33–0, ವರುಣ್‌ ಆ್ಯರನ್‌ 3–0–27–0, ಹರ್ಷಲ್‌ ಪಟೇಲ್ 1–0–16–0, ತಬ್ರೈಜ್‌ ಸಂಶಿ 4–0–39–1.

ಆರ್‌ಸಿಬಿ 6 ಕ್ಕೆ 179 (20 ಓವರ್‌ಗಳಲ್ಲಿ)

ವಿರಾಟ್‌ ಕೊಹ್ಲಿ ಸಿ ಆಶಿಶ್‌ ರೆಡ್ಡಿ ಬಿ ಮುಸ್ತಾಫಿಜುರ್‌ ರಹಮಾನ್‌ 14
ಕೆ.ಎಲ್‌. ರಾಹುಲ್‌ ಸಿ ನಮನ್‌ ಓಜಾ ಬಿ ಮೊಯಿಸಸ್‌ ಹೆನ್ರಿಕ್ಸ್‌ 51
ಎಬಿ ಡಿವಿಲಿಯರ್ಸ್‌ ಸಿ ಕೇನ್‌ ವಿಲಿಯಮ್ಸನ್‌ ಬಿ ಬರೀಂದರ್‌ ಸರನ್‌ 47
ಶೇನ್‌ ವ್ಯಾಟ್ಸನ್‌ ರನ್‌ಔಟ್‌ (ಸರನ್‌) 02
ಸಚಿನ್‌ ಬೇಬಿ ಸಿ ಶಿಖರ್‌ ಧವನ್‌ ಬಿ ಆಶಿಶ್‌ ನೆಹ್ರಾ 27
ಕೇದಾರ್‌ ಜಾಧವ್‌ ಔಟಾಗದೆ 25
ಪರ್ವೇಜ್‌ ರಸೂಲ್‌ ಸಿ ಹೆನ್ರಿಕ್ಸ್‌ ಬಿ ಭುವನೇಶ್ವರ್‌ ಕುಮಾರ್‌ 10

ಇತರೆ: ( ಬೈ 1, ವೈಡ್‌ 2 ) 03

ವಿಕೆಟ್‌ ಪತನ: 1–42 (ಕೊಹ್ಲಿ; 5.2), 2–83 (ರಾಹುಲ್‌; 9.6), 3–90 (ವ್ಯಾಟ್ಸನ್‌; 11.2), 4–129 (ಡಿವಿಲಿಯರ್ಸ್‌; 14.4), 5–152 (ಸಚಿನ್‌ ಬೇಬಿ; 17.1), 6–179 (ರಸೂಲ್‌; 19.6).

ಬೌಲಿಂಗ್‌: ಆಶಿಶ್‌ ನೆಹ್ರಾ 4–0–32–1, ಭುವನೇಶ್ವರ್‌ ಕುಮಾರ್‌ 4–0–36–1, ಮುಸ್ತಾಫಿಜುರ್‌ ರಹಮಾನ್‌ 4–0–34–1, ಬರೀಂದರ್‌ ಸರನ್‌ 4–0–36–1, ಮೊಯಿಸಸ್‌ ಹೆನ್ರಿಕ್ಸ್‌ 4–0–40–1.

ಫಲಿತಾಂಶ: ಸನ್‌ರೈಸರ್ಸ್‌ ಹೈದರಾಬಾದ್‌ಗೆ 15ರನ್‌ ಗೆಲುವು.
ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್‌

Write A Comment