ಮನೋರಂಜನೆ

ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರಿನ ಪಂದ್ಯದಲ್ಲಿ 27 ರನ್‌ಗಳ ಭರ್ಜರಿ ಗೆಲುವು ಪಡೆದ ಡೆಲ್ಲಿ ಡೇರ್‌ಡೆವಿಲ್ಸ್; ಎರಡನೇ ಸ್ಥಾನಕ್ಕೇರಿದ ಡೇರ್‌ಡೆವಿಲ್ಸ್‌

Pinterest LinkedIn Tumblr

sam-billings-karun-nair

ನವದೆಹಲಿ: ಕರ್ನಾಟಕದ ಕರುಣ್ ನಾಯರ್‌ ಮತ್ತು ಚೊಚ್ಚಲ ಪಂದ್ಯವಾಡಿದ ಸ್ಯಾಮ್‌ ಬಿಲ್ಲಿಂಗ್ ಅವರ ಅರ್ಧಶತಕಗಳ ನೆರವಿನಿಂದಾಗಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಟೂರ್ನಿಯ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರಿನ ಪಂದ್ಯದಲ್ಲಿ 27 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ಈ ಮೂಲಕ ಜಹೀರ್ ಖಾನ್ ನಾಯಕತ್ವದ ಡೆಲ್ಲಿ ತಂಡ ಹಿಂದಿನ ಮುಖಾಮುಖಿಯಲ್ಲಿ ನೈಟ್‌ ರೈಡರ್ಸ್ ಎದುರು ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು. ಇದರಿಂದ ಡೆಲ್ಲಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ನೈಟ್‌ ರೈಡರ್ಸ್‌ ಎದುರಿನ ಪಂದ್ಯಕ್ಕೂ ಮೊದಲು ನಾಲ್ಕನೇ ಸ್ಥಾನದಲ್ಲಿತ್ತು.

ಇಲ್ಲಿನ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ನೈಟ್‌ ರೈಡರ್ಸ್‌ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ತವರಿನ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಲು ಸಿಕ್ಕ ಅವಕಾಶ ವನ್ನು ಸಮರ್ಥವಾಗಿ ಬಳಸಿಕೊಂಡ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 186 ರನ್ ಕಲೆ ಹಾಕಿತು.

ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ 2014ರ ಟೂರ್ನಿಯ ಚಾಂಪಿಯನ್‌ ನೈಟ್‌ ರೈಡರ್ಸ್‌ ಪ್ರಮುಖರ ಬ್ಯಾಟಿಂಗ್ ವೈಫಲ್ಯದಿಂದ ಪರದಾಡಿದ್ದ ರಿಂದ ಸೋಲು ಕಾಣಬೇಕಾಯಿತು. ಈ ತಂಡ ಅಂತಿಮವಾಗಿ 18.3 ಓವರ್‌ಗಳಲ್ಲಿ 159 ರನ್ ಕಲೆ ಹಾಕಿ ಆಲೌಟ್‌ ಆಯಿತು.

ಆರಂಭಿಕ ಆಘಾತ, ಚೇತರಿಕೆ:
ಕ್ವಿಂಟನ್‌ ಡಿ ಕಾಕ್ (1) ಮತ್ತು ಯುವ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್ (0) ಮೊದಲ ಓವರ್‌ ಪೂರ್ಣಗೊಳ್ಳುವ ಮೊದಲೇ ವಿಕೆಟ್‌ ಒಪ್ಪಿಸಿದ್ದರಿಂದ ಡೆಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿತು. ಸಂಜು ಸ್ಯಾಮನ್ಸ್‌ (15) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ.

ಆದರೆ ಭರವಸೆಯ ಬ್ಯಾಟ್ಸ್‌ ಮನ್‌ಗಳಾದ ಕರುಣ್ ಮತ್ತು ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ ಬಿಲ್ಲಿಂಗ್ಸ್‌ ಕಟ್ಟಿದ ಜವಾಬ್ದಾರಿಯುತ ಇನಿಂಗ್ಸ್‌ ಮುಂದೆ ಆರಂಭದಲ್ಲಿ ಕಾಡಿದ ಕಷ್ಟ ಮಂಜಿನಂತೆ ಕರಗಿ ಹೋಯಿತು.

ಬಲಗೈ ಬ್ಯಾಟ್ಸ್‌ಮನ್‌ ಕರುಣ್‌ (68, 50ಎಸೆತ, 9 ಬೌಂಡರಿ, 1 ಸಿಕ್ಸರ್‌) ಮತ್ತು ಇಂಗ್ಲೆಂಡ್‌ನ ಬಿಲ್ಲಿಂಗ್ಸ್‌ (54, 34ಎಸೆತ, 3 ಬೌಂಡರಿ, 2 ಸಿಕ್ಸರ್‌) ಅದ್ಭುತ ಜೊತೆಯಾಟವಾಡಿದರು. ಈ ಯುವ ಜೋಡಿ ನಾಲ್ಕನೇ ವಿಕೆಟ್‌ಗೆ 68 ಎಸೆತಗಳಲ್ಲಿ 105 ರನ್ ಕಲೆ ಹಾಕಿತು.

ವಿಶ್ವ ಟ್ವೆಂಟಿ–20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದ ಕಾರ್ಲೊಸ್‌ ಬ್ರಾಥ್‌ವೈಟ್‌ ಇಲ್ಲಿಯೂ ಅಬ್ಬರಿಸಿದರು. ಹನ್ನೊಂದು ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದಂತೆ 34 ರನ್ ಬಾರಿಸಿದರು. ಇದರಿಂದ ಡೆಲ್ಲಿ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಡೆಲ್ಲಿ ಕೊನೆಯ ಆರು ಓವರ್‌ಗಳಲ್ಲಿ 80 ರನ್‌ಗಳನ್ನು ಗಳಿಸಿತು. ಇವರ ಬ್ಯಾಟಿಂಗ್ ಅಬ್ಬರದ ಮಳೆಯಲ್ಲಿ ಮಾಜಿ ಚಾಂಪಿಯನ್ ತಂಡದ ಬೌಲರ್‌ಗಳು ಕೊಚ್ಚಿ ಹೋದರು.

ವೈಫಲ್ಯ: ನೈಟ್ ರೈಡರ್ಸ್ ತಂಡಕ್ಕೂ ಆರಂಭಿಕ ಆಘಾತ ತಪ್ಪಲಿಲ್ಲ. ಅಮೋಘ ಫಾರ್ಮ್‌ನಲ್ಲಿರುವ ಕರ್ನಾಟಕದ ರಾಬಿನ್ ಉತ್ತಪ್ಪ (72, 52 ಎಸೆತ, 6 ಬೌಂಡರಿ, 2 ಸಿಕ್ಸರ್‌) ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಬ್ಯಾಟ್ಸ್‌ಮನ್‌ಗಳೂ ಹೋರಾಟವನ್ನೇ ತೋರಲಿಲ್ಲ.

ಆರಂಭಿಕರಾಗಿ ಬಂದ ಉತ್ತಪ್ಪ ಎಂಟನೇ ವಿಕೆಟ್‌ವರೆಗೂ ಕ್ರೀಸ್‌ನಲ್ಲಿದ್ದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಅವರಿಗೆ ಬೆಂಬಲ ಲಭಿಸಲಿಲ್ಲ. ಪ್ರಮುಖ ಆಟಗಾರರಾದ ಗಂಭೀರ್ (6), ಪಿಯೂಷ್ ಚಾವ್ಲಾ (8), ಯೂಸುಫ್ ಪಠಾಣ್‌ (10) ಮತ್ತು ಸೂರ್ಯಕುಮಾರ್ ಯಾದವ್ (21) ದೊಡ್ಡ ಮೊತ್ತ ಗಳಿಸಲಿಲ್ಲ.

ನೈಟ್ ರೈಡರ್ಸ್ ತಂಡ ಮೊದಲ ಹತ್ತು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 88 ರನ್ ಗಳಿಸಿ ಉತ್ತಮ ರನ್‌ರೇಟ್ ಕಾಪಾಡಿಕೊಂಡು ಬಂದಿತ್ತು. ಆದರೆ, ಕೊನೆಯ ಎಂಟು ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಸಂಕಷ್ಟದ ಸಮಯದಲ್ಲಿಯೂ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದ ಉತ್ತಪ್ಪ ಔಟಾಗುತ್ತಿದ್ದಂತೆ ರೈಡರ್ಸ್ ತಂಡದ ಜಯದ ಆಸೆಯೂ ಕರಗಿ ಹೋಯಿತು. ಎಡಗೈ ವೇಗಿ ಜಹೀರ್ ಮತ್ತು ಬ್ರಾಥ್‌ವೈಟ್‌ ತಲಾ ಮೂರು ವಿಕೆಟ್‌ ಕಬಳಿಸಿ ನೈಟ್ ರೈಡರ್ಸ್ ತಂಡವನ್ನು ಕಟ್ಟಿ ಹಾಕಿದರು.

ಸ್ಕೋರ್‌ಕಾರ್ಡ್‌

ಡೆಲ್ಲಿ ಡೇರ್‌ಡೆವಿಲ್ಸ್ 8 ಕ್ಕೆ 186 (20 ಓವರ್‌ಗಳಲ್ಲಿ)

ಕ್ವಿಂಟನ್‌ ಡಿ ಕಾಕ್‌ ಸಿ. ಬ್ರಾಡ್‌ ಹಾಗ್‌ ಬಿ. ಆ್ಯಂಡ್ರೆ ರಸೆಲ್‌ 01
ಶ್ರೇಯಸ್‌ ಅಯ್ಯರ್‌ ಎಲ್‌ಬಿಡಬ್ಲ್ಯು ಬಿ. ಸುನಿಲ್ ನಾರಾಯಣ್‌ 00
ಸಂಜು ಸ್ಯಾಮ್ಸನ್‌ ಎಲ್‌ಬಿಡಬ್ಲ್ಯು ಬಿ. ಸುನಿಲ್ ನಾರಾಯಣ್‌ 15
ಕರುಣ್‌ ನಾಯರ್‌ ಎಲ್‌ಬಿಡಬ್ಲ್ಯು ಬಿ. ಉಮೇಶ್‌ ಯಾದವ್ 68
ಸ್ಯಾಮ್‌ ಬಿಲ್ಲಿಂಗ್‌ ಬಿ. ಉಮೇಶ್ ಯಾದವ್ 54
ಕ್ರಿಸ್‌ ಮಾರಿಸ್‌ ಬಿ. ಉಮೇಶ್‌ ಯಾದವ್‌ 00
ಕಾರ್ಲೊಸ್‌ ಬ್ರಾಥ್‌ವೈಟ್‌ ಸಿ. ಸುನಿಲ್‌ ನಾರಾಯಣ್ ಬಿ. ಆ್ಯಂಡ್ರೆ ರಸೆಲ್‌ 34
ರಿಷಬ್‌ ಪಂಥ್ ರನ್ ಔಟ್‌ (ಸೂರ್ಯಕುಮಾರ್‌್/ಉತ್ತಪ್ಪ) 04
ಮಹಮ್ಮದ್ ಶಮಿ ಔಟಾಗದೆ 00

ಇತರೆ: (ಬೈ–1, ಲೆಗ್‌ ಬೈ–6, ವೈಡ್‌–2, ನೋ ಬಾಲ್‌–1) 10

ವಿಕೆಟ್‌ ಪತನ: 1–1 (ಅಯ್ಯರ್‌; 0.3), 2–2 (ಕ್ವಿಂಟನ್‌; 0.5), 3–32 (ಸ್ಯಾಮ್ಸನ್‌; 4.6), 4–137 (ಕರುಣ್‌; 16.2), 5–137 (ಮಾರಿಸ್‌; 16.4), 6–174 (ಬಿಲ್ಲಿಂಗ್; 18.4), 7–182 (ಬ್ರಾಥ್‌ವೈಟ್‌; 19.2), 8–186 (ರಿಷಿಬ್; 19.6).

ಬೌಲಿಂಗ್‌: ಆ್ಯಂಡ್ರೆ ರಸೆಲ್‌ 4–0–26–3, ಜಾಸನ್‌ ಹೋಲ್ಡರ್‌ 4–0–35–0, ಸುನಿಲ್ ನಾರಾಯಣ್‌ 3–0–22–1, ಉಮೇಶ್‌ ಯಾದವ್ 3–0–33–3, ಬ್ರಾಡ್‌ ಹಾಗ್‌ 4–0–39–0, ಪಿಯೂಷ್ ಚಾವ್ಲಾ 2–0–24–0.

ಕೋಲ್ಕತ್ತ ನೈಟ್ ರೈಡರ್ಸ್‌ 159 (18.3 ಓವರ್‌ಗಳಲ್ಲಿ)

ರಾಬಿನ್ ಉತ್ತಪ್ಪ ಸಿ. ಕರುಣ್ ನಾಯರ್ ಬಿ. ಕ್ರಿಸ್‌ ಮಾರಿಸ್‌ 72
ಗೌತಮ್ ಗಂಭೀರ್ ಸಿ. ಶ್ರೇಯಸ್‌ ಅಯ್ಯರ್‌ ಬಿ. ಜಹೀರ್ ಖಾನ್‌ 06
ಪಿಯೂಷ್ ಚಾವ್ಲಾ ಎಲ್‌ಬಿಡಬ್ಲ್ಯು ಬಿ. ಜಹೀರ್ ಖಾನ್‌ 08
ಯೂಸುಫ್‌ ಪಠಾಣ್‌ ಸಿ. ಅಮಿತ್‌ ಮಿಶ್ರಾ ಬಿ. ಕಾರ್ಲೊಸ್‌ ಬ್ರಾಥ್‌ವೈಟ್‌ 10
ಸೂರ್ಯಕುಮಾರ್ ಯಾದವ್ ಸಿ. ಶ್ರೇಯಸ್‌ ಬಿ. ಕಾರ್ಲೊಸ್‌ ಬ್ರಾಥ್‌ವೈಟ್‌ 21
ಆರ್‌. ಸತೀಶ್ ಸಿ. ಕ್ರಿಸ್‌ ಮಾರಿಸ್ ಬಿ. ಕಾರ್ಲೊಸ್ ಬ್ರಾಥ್‌ವೈಟ್‌ 06
ಆ್ಯಂಡ್ರೆ ರಸೆಲ್‌ ಸಿ ಮತ್ತು ಅಮಿತ್ ಮಿಶ್ರಾ 17
ಜಾಸನ್ ಹೋಲ್ಡರ್ ರನ್‌ ಔಟ್‌ (ಕ್ರಿಸ್‌ ಮಾರಿಸ್‌) 00
ಉಮೇಶ್‌ ಯಾದವ್ ಸಿ. ಕ್ರಿಸ್‌ ಮಾರಿಸ್ ಬಿ. ಜಹೀರ್ ಖಾನ್‌ 02
ಸುನಿಲ್ ನಾರಾಯಣ್‌ ರನ್‌ ಔಟ್‌ (ಶ್ರೇಯಸ್‌ ಅಯ್ಯರ್‌) 04
ಬ್ರಾಡ್‌ ಹಾಗ್‌ ಔಟಾಗದೆ 00

ಇತರೆ:( ಲೆಗ್ ಬೈ–3, ವೈಡ್‌–4, ನೋ ಬಾಲ್‌–6 ) 13

ವಿಕೆಟ್‌ ಪತನ: 1–21 (ಗಂಭೀರ್‌; 2.6), 2–33 (ಚಾವ್ಲಾ; 4.4), 3–58 (ಯೂಸುಫ್‌; 7.5), 4–94 (ಸೂರ್ಯಕುಮಾರ್; 11.2), 5–107 (ಸತೀಶ್‌; 13.3), 6–151 (ರಸೆಲ್‌; 16.6), 7–152 (ಹೋಲ್ಡರ್‌; 17.2), 8––153 (ಉತ್ತಪ್ಪ; 17.4), 9–159 (ಸುನಿಲ್‌; 18.2), 10–159 (ಉಮೇಶ್‌; 18.3).

ಬೌಲಿಂಗ್‌: ಜಹೀರ್ ಖಾನ್‌ 3.3–0–21–3, ಮಹಮ್ಮದ್ ಶಮಿ 4–0–33–0, ಕ್ರಿಸ್‌ ಮಾರಿಸ್‌ 3–0–19–1, ಕಾರ್ಲೊಸ್‌ ಬ್ರಾಥ್‌ವೈಟ್‌ 4–0–47–3, ಅಮಿತ್‌ ಮಿಶ್ರಾ 4–0–36–1.

ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ 27 ರನ್ ಜಯ.
ಪಂದ್ಯಶ್ರೇಷ್ಠ: ಕಾರ್ಲೊಸ್‌ ಬ್ರಾಥ್‌ವೈಟ್‌.

Write A Comment