ಕರ್ನಾಟಕ

ವಿಧಾನಸೌಧ ಬಳಿಯ ಎಂ.ಎಸ್‌. ಬಿಲ್ಡಿಂಗ್‌ನಲ್ಲಿ ಅಗ್ನಿ ಅವಘಡ: ದಾಖಲೆಗಳು ಭಸ್ಮ

Pinterest LinkedIn Tumblr

pvec1may16aRevenue 01ಬೆಂಗಳೂರು: ವಿಧಾನಸೌಧ ಬಳಿಯ ಎಂ.ಎಸ್‌. ಬಿಲ್ಡಿಂಗ್‌ನಲ್ಲಿ ಶನಿವಾರ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳು ಸುಟ್ಟಿವೆ.

‘ಶುಕ್ರವಾರ (ಏಪ್ರಿಲ್‌ 29) ಕೆಲವು ವಿದ್ಯುತ್‌ ಉಪಕರಣಗಳನ್ನು ಆಫ್‌ ಮಾಡದೆ ಸಿಬ್ಬಂದಿ ಮನೆಗೆ ಹೋಗಿದ್ದರು. ಅದೇ ಕಾರಣಕ್ಕೆ ಬೆಳಿಗ್ಗೆ ಯುಪಿಎಸ್‌ನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಕಾಣಿಸಿಕೊಂಡಿರಬಹುದು’ ಎಂದು ಅಗ್ನಿ ಶಾಮಕ ಇಲಾಖೆಯ ಉಪನಿರ್ದೇಶಕ ರಮೇಶ್‌ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಲ್ಡಿಂಗ್‌ನ ಎರಡನೇ ದ್ವಾರದಲ್ಲಿರುವ 5ನೇ ಮಹಡಿಯ ಭೂ ಕಂದಾಯ ಇಲಾಖೆ ಕಚೇರಿಯೊಳಗೆ ಬೆಳಿಗ್ಗೆ 7ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು. ಅಲ್ಲದೆ ಕಂಪ್ಯೂಟರ್‌, ಫ್ಯಾನ್‌ ಸೇರಿದಂತೆ ಕಚೇರಿಯಲ್ಲಿದ್ದ ಪೀಠೋಪಕರಣಗಳೆಲ್ಲ ಸುಟ್ಟು ಹೋದವು.

ದಟ್ಟ ಹೊಗೆ ಗಮನಿಸಿದ ಅದೇ ಎಂ.ಎಸ್‌. ಬಿಲ್ಡಿಂಗ್‌ನ ನೆಲ ಅಂತಸ್ತಿನಲ್ಲಿದ್ದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಲು ಹೋದರು. ಬೆಂಕಿ ಹತೋಟಿಗೆ ಬರಲಿಲ್ಲ. ಬಳಿಕ ಹೈಗ್ರೌಂಡ್ಸ್‌್ ಅಗ್ನಿ ಶಾಮಕ ಠಾಣೆ ವಾಹನ ಕರೆಯಿಸಿ ಬೆಂಕಿ ನಂದಿಸಲಾಯಿತು.

‘ಘಟನೆಯಲ್ಲಿ ಕಚೇರಿಯಲ್ಲಿದ್ದ ಕಪಾಟೊಂದು ಸಂಪೂರ್ಣ ಸುಟ್ಟಿದೆ. ಅದರಲ್ಲಿದ್ದ ಕಂದಾಯ ಇಲಾಖೆಗೆ ಸಂಬಂಧಪಟ್ಟ ನೋಂದಣಿ ಪುಸ್ತಕ ಹಾಗೂ ಕಡತಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸರ್ಕಾರದ ಹಳೇ ಆದೇಶದ ಪ್ರತಿಗಳು, ಅಧಿಸೂಚನೆಗಳು ಹಾಗೂ ನಿರುಪಯುಕ್ತ ಕಾಗದಗಳು ಮಾತ್ರ ಸುಟ್ಟಿವೆ. ಯಾವುದೇ ಮಹತ್ವದ ದಾಖಲೆ ಸುಟ್ಟಿಲ್ಲ’ ಎಂದು ಅಧೀನ ಕಾರ್ಯದರ್ಶಿ ಉಮಾದೇವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

Write A Comment