ಕರ್ನಾಟಕ

ಕಾಮೆಡ್‌-ಕೆ, ಸಿಇಟಿಯೂ ಇದೆ: ಸುಪ್ರೀಂಕೋರ್ಟ್‌ ತೀರ್ಪು ಆಧರಿಸಿ ಸೀಟು ಹಂಚಿಕೆ ನಿರ್ಧಾರ: ಜಯಚಂದ್ರ

Pinterest LinkedIn Tumblr

jayaಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಏಕರೂಪದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ, ಈ ವರ್ಷ ಎಂದಿನಂತೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನೂ (ಸಿಇಟಿ) ನಡೆಸಲು ಸರ್ಕಾರ ತೀರ್ಮಾನಿಸಿದೆ.

ಕಾಮೆಡ್‌–ಕೆ ಪರೀಕ್ಷೆ ನಡೆಸಲು ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಸಂಘವೂ ನಿರ್ಧರಿಸಿದೆ. ‘ಎನ್‌ಇಇಟಿ ಹಾಗೂ ಸಿಇಟಿಗಳೆರಡಕ್ಕೂ ವಿದ್ಯಾರ್ಥಿಗಳು ಹಾಜರಾಗಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಶನಿವಾರ ತಿಳಿಸಿದರು.

ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಎನ್‌ಇಇಟಿಗೆ ನೊಂದಾಯಿಸಿದ ವಿದ್ಯಾರ್ಥಿಗಳು ಭಾನುವಾರ (ಮೇ1ರಂದು) ನಡೆಯುವ ಪರೀಕ್ಷೆಗೆ ಹಾಜರಾಗಬೇಕು. ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶ ಬಯಸುವ ವಿದ್ಯಾರ್ಥಿಗಳು ಭಾನುವಾರದ ಎನ್‌ಇಇಟಿಗೆ ಹೆಸರು ನೋಂದಾಯಿಸದಿದ್ದರೆ ಜುಲೈ 24ರಂದು ನಡೆಯುವ ಎರಡನೇ ಹಂತದ ಎನ್‌ಇಇಟಿಗೆ ಹಾಜರಾಗಬೇಕು’ ಎಂದರು.

ಸಿಇಟಿಗೂ ಸಿದ್ಧರಾಗಿ: ‘ರಾಜ್ಯದ 391 ಕೇಂದ್ರಗಳಲ್ಲಿ ಮೇ 4 ಹಾಗೂ 5ರಂದು ಸಿಇಟಿ ನಡೆಯಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮೇ 3ರಂದು ಎನ್‌ಇಇಟಿ ಕುರಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಅರ್ಜಿಯ ವಿಚಾರಣೆ ನಡೆಯಲಿದೆ. ಸಿಇಟಿಯ ರ‍್ಯಾಂಕಿಂಗ್ ಆಧಾರದಲ್ಲಿ ವೈದ್ಯಕೀಯ, ದಂತ ವ್ಯದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ ಮೇ 3ರ ವಿಚಾರಣೆ ಬಳಿಕ ನೀಡುವ ತೀರ್ಪಿನ ಆಧಾರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಆದರೂ, ವಿದ್ಯಾರ್ಥಿಗಳು ಸಿಇಟಿ ಬರೆಯಲು ಸಿದ್ಧರಾಗಿರಬೇಕು’ ಎಂದರು.

‘ಎನ್‌ಇಇಟಿ ಪರೀಕ್ಷೆಯನ್ನು ಈ ವರ್ಷದ ಬದಲು ಮುಂದಿನ ವರ್ಷದಿಂದ ಜಾರಿಗೊಳಿಸುವುದು ಒಳ್ಳೆಯದು ಎಂಬುದು ರಾಜ್ಯದ ನಿಲುವು. ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ನಿಲುವು ತಿಳಿಸುವ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರ ಬಳಿ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ’ ಎಂದರು.

ಇಂದು ದೇಶದಾದ್ಯಂತ ಎನ್ಇಇಟಿ
ನವದೆಹಲಿ (ಪಿಟಿಐ): ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‌ಗಳ ಪ್ರವೇಶಾತಿಗೆ ದೇಶದಾದ್ಯಂತ ಏಕರೂಪದ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ಎನ್‌ಇಇಟಿ) ನಡೆಸುವಂತೆ ನೀಡಿದ್ದ ತೀರ್ಪನ್ನು ಮಾರ್ಪಾಡು ಮಾಡಬೇಕು ಎಂಬ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಶನಿವಾರ ನಿರಾಕರಿಸಿತು. ಹೀಗಾಗಿ, ಎಂಬಿಬಿಎಸ್‌, ಬಿಡಿಎಸ್‌ ಕೋರ್ಸ್‌ಗಳ ಪ್ರವೇಶ­ಕ್ಕಾಗಿ ಭಾನುವಾರ (ಮೇ 1) ರಾಷ್ಟ್ರದಾದ್ಯಂತ ಮೊದಲ ಎನ್‌ಇಇಟಿ ನಡೆಯಲಿದೆ.

ಇತರ ವೈದ್ಯ ಪದ್ಧತಿ ಪ್ರವೇಶಕ್ಕೆ…
ಸುಪ್ರೀಂ’ ಸೂಚಿಸಿರುವುದು ವೈದ್ಯ ಕೀಯ ಹಾಗೂ ದಂತ ವೈದ್ಯಕೀಯ ಪರೀಕ್ಷೆಗಳಿಗೆ ಏಕರೂಪದ ಪರೀಕ್ಷೆ ನಡೆಸುವಂತೆ ಮಾತ್ರ. ಆದರೆ ಎಂಜಿನಿ ಯರಿಂಗ್‌ ಮಾತ್ರವಲ್ಲದೆ ಆಯುರ್ವೇದ, ಯುನಾನಿ, ಹೋಮಿಯೋಪಥಿ, ಫಾರ್ಮಸಿ, ಪಶುವೈದ್ಯಕೀಯ, ಕೃಷಿ ಪದವಿ ಸೀಟು ಹಂಚಿಕೆಗೆ ಸಿಇಟಿ ಅನಿವಾರ್ಯ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಬದಲಾಗದು: ‘ಎನ್‌ಇಇಟಿ ನಡೆಯುವುದು ಮೆರಿಟ್‌ ನಿರ್ಧರಿಸುವ ಸಲುವಾಗಿ ಮಾತ್ರ. ಈ ಪರೀಕ್ಷೆಯಿಂದ ಮೀಸಲಾತಿ ನೀತಿ, ರಾಜ್ಯದ ಪಾಲಿನ ಕೋಟಾಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಸದ್ಯಕ್ಕೆ ರಾಜ್ಯದ ಶೇ 15ರಷ್ಟು ಸೀಟುಗಳು ಕೇಂದ್ರ ಕೋಟಾಕ್ಕೆ ಮೀಸಲು. ಉಳಿದ ಸೀಟುಗಳು ರಾಜ್ಯಕ್ಕೆ ಸಿಗಲಿವೆ. ನಾವು ಎರಡು ವರ್ಷಗಳಿಂದ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಸೀಟುಗಳನ್ನು ಅಖಿಲ ಭಾರತ ಮಟ್ಟದ ಮೆರಿಟ್‌ ಪಟ್ಟಿ ಆಧರಿಸಿಯೇ ಹಂಚಿಕೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

** *** **
ಸರ್ಕಾರ ಸಿಇಟಿ ನಡೆಸುವುದಾದರೆ ಕಾಮೆಡ್‌–ಕೆ ಪರೀಕ್ಷೆಯೂ ನಡೆಯುತ್ತದೆ. ಈ ಹಿಂದಿನ ವರ್ಷದಂತೆಯೇ ಸೀಟು ಹಂಚಿಕೆ, ಮೀಸಲಾತಿ ಇರುತ್ತದೆ.
-ಎ.ಎಸ್‌.ಶ್ರೀಕಾಂತ್‌, ಕಾಮೆಡ್‌–ಕೆ ಸಿಇಒ

Write A Comment