ರಾಷ್ಟ್ರೀಯ

ಮೋದಿ ಪಿ.ಎಂ: ಶೇ 70 ಜನ ಒಲವು; ಎನ್‌ಡಿಎ ಸರ್ಕಾರಕ್ಕೆ 2 ವರ್ಷ: ಸಿಎಂಎಸ್‌ ಸಮೀಕ್ಷೆ

Pinterest LinkedIn Tumblr

modiiiiiನವದೆಹಲಿ (ಪಿಟಿಐ): ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ತಮ್ಮ ಜೀವನ ಮಟ್ಟದಲ್ಲಿ ‘ಏನೂ ಬದಲಾವಣೆ ಆಗಿಲ್ಲ’ ಎಂದು ಶೇ 49ರಷ್ಟು ಜನರು ಹೇಳಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಆದರೆ, ಮೋದಿ ಅವರು ಮುಂದೆಯೂ ಪ್ರಧಾನಿಯಾಗಿ ಮುಂದುವರಿಯಬೇಕು ಎಂದು ಶೇ 70ರಷ್ಟು ಮಂದಿ ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆ ತಿಳಿಸಿದೆ.

ಕೇಂದ್ರದ ಎನ್‌ಡಿಎ ಸರ್ಕಾರ ಎರಡು ವರ್ಷ ಪೂರೈಸಲು ಕೆಲವೇ ದಿನಗಳು ಬಾಕಿ ಇರುವಂತೆಯೇ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌, (ಸಿಎಂಎಸ್‌) ತಾನು ನಡೆಸಿರುವ ಸಮೀಕ್ಷೆಯ ವಿವರಗಳನ್ನು ಪ್ರಕಟಿಸಿದೆ. ಮೋದಿ ಸರ್ಕಾರ ಬಂದ ನಂತರ ಜೀವನ ಮಟ್ಟ ಇನ್ನಷ್ಟು ಕುಸಿದಿದೆ ಎಂದು ಶೇ 15ರಷ್ಟು ಜನರು ಹೇಳಿದ್ದಾರೆ.

ಸರ್ಕಾರದ ಯೋಜನೆಗಳು ಬಡವರನ್ನು ತಲುಪುತ್ತಿಲ್ಲ ಎಂದು ಶೇ 43ರಷ್ಟು ಜನ ಪ್ರತಿಪಾದಿಸಿದ್ದಾರೆ. ಈ ಸಮೀಕ್ಷೆಗಾಗಿ 15 ರಾಜ್ಯಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳ 4 ಸಾವಿರ ಜನರನ್ನು ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ಸಂಪರ್ಕಿಸಿದೆ.

ಜನಪ್ರಿಯತೆಗೆ ಕುಂದಿಲ್ಲ: ಪ್ರಧಾನಿ ಹುದ್ದೆಗೆ ಏರಿ ಎರಡು ವರ್ಷವಾಗುತ್ತಾ ಬಂದರೂ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಕುಂದಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಪ್ರಧಾನಿಯಾಗಿ ಅವರ ಕಾರ್ಯವೈಖರಿಯನ್ನು ಶೇ 62ರಷ್ಟು ಜನರು ಮೆಚ್ಚಿದ್ದಾರೆ. ಐದು ವರ್ಷಕ್ಕಿಂತಲೂ ಹೆಚ್ಚು ಅವಧಿಗೆ ಅವರು ಪ್ರಧಾನಿಯಾಗಿ ಮುಂದುವರಿಯಬೇಕು ಎಂದು ಶೇ 70ರಷ್ಟು ಜನರು ಅಭಿಪ್ರಾಯ ಪಟ್ಟಿದ್ದಾರೆ.

ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಮೋದಿ ಈಡೇರಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಮೂರನೇ ಒಂದಕ್ಕಿಂತಲೂ ಕಡಿಮೆ ಜನ ಹೇಳಿದ್ದಾರೆ. ಮೋದಿ ಸರ್ಕಾರವು ಭಾಗಶಃ ಭರವಸೆಗಳನ್ನು ಈಡೇರಿಸಿದೆ ಎಂದು ಶೇ 43 ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

‘ಎನ್‌ಡಿಎ ಸರ್ಕಾರದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ, ಬೆಲೆ ಏರಿಕೆ ಮತ್ತು ತಳಮಟ್ಟದಲ್ಲಿರುವ ನಿರುದ್ಯೋಗದ ಬಗ್ಗೆ ಜನ ಸಾಮಾನ್ಯರಲ್ಲಿ ಆತಂಕ ಇದೆ’ ಎಂದು ಸಿಎಂಎಸ್‌ ಮಹಾ ನಿರ್ದೇಶಕರಾದ ಪಿ.ಎನ್. ವಸಂತಿ ಹೇಳಿದ್ದಾರೆ.

ವೈಫಲ್ಯ: ಮೋದಿ ಸರ್ಕಾರದ ವೈಫಲ್ಯದ ಬಗ್ಗೆ ಸಮೀಕ್ಷೆಯಲ್ಲಿ ಕೇಳಿದ್ದಕ್ಕೆ, ಹಣದುಬ್ಬರ ನಿಯಂತ್ರಣ ಸಾಧ್ಯವಾಗದೇ ಇರುವುದನ್ನು ಶೇ 32 ರಷ್ಟು ಮಂದಿ ಪ್ರಸ್ತಾಪಿಸಿದ್ದಾರೆ. ಉಳಿದಂತೆ, ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ನೀಡಲು ಸಾಧ್ಯವಾಗದಿರುವುದನ್ನು ಶೇ 29ರಷ್ಟು ಜನ ಹಾಗೂ ನೀಡಿದ ಭರವಸೆಯಂತೆ ಕಪ್ಪು ಹಣ ವಾಪಸ್‌ ತರದಿರುವುದನ್ನು ಶೇ 26ರಷ್ಟು ಜನ ಉಲ್ಲೇಖಿಸಿದ್ದಾರೆ.

ಸಾಧನೆ: ಶೇ 36ರಷ್ಟು ಮಂದಿ, ಜನ –ಧನ ಯೋಜನೆಯನ್ನು ಕೇಂದ್ರ ಸರ್ಕಾರದ ಪ್ರಮುಖ ಸಾಧನೆ ಎಂದು ಹೇಳಿದ್ದಾರೆ. ಸ್ವಚ್ಛ ಭಾರತ ಅಭಿಯಾನವನ್ನು ಶೇ 32 ಮಂದಿ, ನೇರ ಹಣ ವರ್ಗಾವಣೆ ಯೋಜನೆಯನ್ನು ಶೇ 23 ರಷ್ಟು ಜನ ಸರ್ಕಾರದ ಸಾಧನೆ ಪಟ್ಟಿಗೆ ಸೇರಿಸಿದ್ದಾರೆ.

ಅತ್ಯುತ್ತಮ ಸಚಿವರು
1. ಸುಷ್ಮಾ ಸ್ವರಾಜ್‌
2. ರಾಜನಾಥ್‌ ಸಿಂಗ್‌
3. ಸುರೇಶ್‌ ಪ್ರಭು
4. ಮನೋಹರ್‌ ಪರಿಕ್ಕರ್‌
5. ಅರುಣ್‌ ಜೇಟ್ಲಿ

ಅತ್ಯುತ್ತಮ ಇಲಾಖೆಗಳು
1. ರೈಲ್ವೆ
2. ಹಣಕಾಸು
3. ವಿದೇಶಾಂಗ ವ್ಯವಹಾರಗಳು

Write A Comment