ಕರ್ನಾಟಕ

ಮಠ ಪ್ರವೇಶಕ್ಕೆ ರಾಘವೇಶ್ವರರಿಗೆ ನಿರ್ಬಂಧದ ಕೋರಿಕೆ ಹೈಕೋರ್ಟ್‌ನಲ್ಲಿ ವಿಚಾರಣೆ

Pinterest LinkedIn Tumblr

raಬೆಂಗಳೂರು, ಏ. ೨೯- ಹೊಸನಗರ ಶ್ರೀ ರಾಮಚಂದ್ರಾಪುರ ಮಠವನ್ನು ನಿಯಂತ್ರಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಇಂದೇ ನಡೆಸಬೇಕೆಂದು ಸಲ್ಲಿಸಿದ್ದ ರಾಘವೇಶ್ವರ ಶ್ರೀ ವಕೀಲರ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ.
ರಾಘವೇಶ್ವರ ಶ್ರೀಗಳ ಮೇಲೆ ಎರಡು ಅತ್ಯಾಚಾರ ಆರೋಪ ಇರುವುದರಿಂದ ಶ್ರೀಗಳ ಮಠದ ಆವರಣ ಪ್ರವೇಶಕ್ಕೆ ನಿಷೇಧ ಹೇರುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಗುರುವಾರದ ವಿಚಾರಣೆಯ ವೇಳೆ ಹೈಕೋರ್ಟ್ ಮಠ ನಿಯಂತ್ರಣ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ನೀಡುವಂತೆ ಅರ್ಜಿದಾರರಿಗೆ ನಿರ್ದೇಶಿಸಿತ್ತು.
ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ನೀಡಲು ನೀಡಿದ್ದ ನಿರ್ದೇಶನ ಹಿಂಪಡೆಯುವಂತೆ ಶ್ರೀಗಳ ಪರ ವಕೀಲರು ಇಂದು ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಈ ವೇಳೆ ನಿರ್ದೇಶನ ಹಿಂಪಡೆಯಲು ನಿರಾಕರಿಸಿದ ಕೋರ್ಟ್ ಬೇಸಿಗೆ ರಜೆಯ ಬಳಿಕವೇ ಅರ್ಜಿ ವಿಚಾರಣೆ ಕೈಗೆತ್ತುಕೊಳ್ಳುವುದಾಗಿ ತಿಳಿಸಿದೆ.
ರಾಮಚಂದ್ರಾಪುರ ಮಠದ ಮೇಲೆ ನಿಯಂತ್ರಣ ಹೇರಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ, ಹೈಕೋರ್ಟ್‌ಗೆ ಗುರುವಾರ ಎದುರ್ಕಳ ಈಶ್ವರ್ ಭಟ್, ಶಂಕರ್ ಭಟ್ ಹಾಗೂ ಇತರ 6 ಮಂದಿ ಪಿಐಎಲ್ ಸಲ್ಲಿಸಿದ್ದರು. ರಾಘವೇಶ್ವರ ಶ್ರೀಗಳ ಮೇಲೆ 2 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಶ್ರೀಗಳ ವಿರುದ್ಧ 4 ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಅಧಿಕಾರ ದುರುಪಯೋಗ, ತೆರಿಗೆ ವಂಚನೆ ಹಾಗೂ ಅತ್ಯಾಚಾರ ಆರೋಪ ಇರುವ ಮಠಾಧಿಪತಿಗಳು ದೈನಂದಿನ ಧಾರ್ಮಿಕ ಚಟುವಟಿಕೆ ನಡೆಸುವುದು ಸರಿಯಲ್ಲ. ಇದರಿಂದ ಭಕ್ತಾಧಿಕಾದಿಗಳ ಮನಸ್ಸಿಗೆ ನೋವುಂಟಾಗಿದೆ. ಹಾಗಾಗಿ ಮಠದ ಮೇಲೆ ನಿಯಂತ್ರಣ ಹೇರಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಹೊಸ ಮಠಾಧಿಪತಿ ಆಯ್ಕೆಗೆ ಸಮಿತಿ ರಚನೆ ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಸಂಬಂಧ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ರಾಮಚಂದ್ರಾಪುರ ಮಠ, ರಾಘವೇಶ್ವರ ಶ್ರೀ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ.

Write A Comment