ಕರ್ನಾಟಕ

ಸಮಾರಂಭಗಳಿಗೆ ಜನರನ್ನು ಸೇರಿಸುವ ತಾಕತ್ತು ನಮಗೂ ಇದೆ : ಬಿಎಸ್ವೈಗೆ ಸಿ ಎಂ ತಿರುಗೇಟು

Pinterest LinkedIn Tumblr

sabheಮೈಸೂರು, ಏ.29-ಸಭೆ, ಸಮಾರಂಭಗಳಿಗೆ ಸಾವಿರಾರು ಮಂದಿಯನ್ನು ಸೇರಿಸುವ ತಾಕತ್ತು ನಮಗೂ ಇದೆ. ಆದರೆ, ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡುವುದನ್ನು ಕಲಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ, ಸಮಾರಂಭಗಳಿಗೆ ನಾಲ್ಕರಿಂದ ಐದು ಸಾವಿರ ಮಂದಿಯನ್ನು ಸೇರಿಸುತ್ತೇನೆ ಎಂದು ಹೇಳುತ್ತಿದ್ದಾರೆ ಅಂತಹ ತಾಕತ್ತು ತಮಗೂ ಇದೆ. ಆದರೆ, ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ ಎಂದ ಅವರು, ಇಲ್ಲ, ಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಇನ್ನು ಮುಂದಾದರೂ ಬದಲಾಗಲಿ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಆರೋಪ ಮಾಡುತ್ತಾ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇತಂಹ ನಡವಳಿಕೆ ಸಲ್ಲದು ಎಂದರು. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಹಾಗೂ ನಾವು ಎದುರಿಸಬೇಕಿರುವ ಸವಾಲುಗಳನ್ನು ಪರಿಶೀಲಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ. ವಾಸ್ತವಾಂಶದ ಹಿನ್ನೆಲೆಯಲ್ಲೇ ಎಲ್ಲಾ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ನುಡಿದರು.

ಬರ ಪರಿಶೀಲನೆ ಕುರಿತಂತೆ ಮಾಡುತ್ತಿರುವ ಆರೋಪಗಳಲ್ಲೂ ಹುರುಳಿಲ್ಲ. ವಾಸ್ತವ ಸ್ಥಿತಿಗತಿಯನ್ನು ಅರಿತೇ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಕೆ.ಸೋಮಶೇಖರ್ ಅವರು ನೀಡಿರುವ ಜಾತಿ ಪ್ರಮಾಣಪತ್ರ ಸುಳ್ಳು ಎಂಬುದು ಸಾಬೀತಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಪೂರ್ಣ ಮಾಹಿತಿ ಬಂದಿಲ್ಲ. ಮಾಹಿತಿ ಬಂದ ನಂತರ ಮಾತನಾಡುತ್ತೇನೆ ಎಂದರು.

ಎಸ್.ಎಂ.ಕೃಷ್ಣ ಅವರು ದೆಹಲಿಗೆ ಹಲವಾರು ಬಾರಿ ಭೇಟಿ ನೀಡುತ್ತಾರೆ. ವರಿಷ್ಠರೊಂದಿಗಿನ ಭೇಟಿಗೆ ಹೋದಾಗಲೆಲ್ಲಾ ಏಕೆ ಹೋಗುತ್ತಾರೆ ಎಂದು ವಿಚಾರಿಸುವುದಿಲ್ಲ. ಪ್ರತೀ ಬಾರಿ ಅವರು ಹೋದಾಗ ಯಾವ ಕೆಲಸಕ್ಕೆ ಹೋಗುತ್ತಾರೆ ಎಂಬುದನ್ನು ತಿಳಿಯುವ ಅಗತ್ಯವೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

Write A Comment