ಕರ್ನಾಟಕ

ರೌಡಿಯೊಬ್ಬನನ್ನು ಹಿಂಬಾಲಿಸಿ ಲಾಂಗ್ ಹಾಗೂ ಮಚ್ಚುಗಳಿಂದ ಭೀಕರವಾಗಿ ಕೊಂದರು

Pinterest LinkedIn Tumblr

roudiಬೆಂಗಳೂರು, ಏ.28- ರೌಡಿಯೊಬ್ಬನನ್ನು ಬೈಕ್‌ಗಳಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಮನಬಂದಂತೆ ಲಾಂಗ್ ಹಾಗೂ ಮಚ್ಚುಗಳಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ರಸ್ತೆ ಚೋಳೂರುಪಾಳ್ಯ ನಿವಾಸಿ ಹರ್ಷ(27) ಕೊಲೆಯಾದ ರೌಡಿ. ಕಾರು ಚಾಲಕನಾಗಿ ವೃತ್ತಿ ಮಾಡುತ್ತಿದ್ದ ಹರ್ಷ 2010ರಲ್ಲಿ ವಿಜಯನಗರದಲ್ಲಿ ನಡೆದಿದ್ದ ಕೊಲೆ ಆರೋಪಿಯಾಗಿದ್ದು, ಈತನ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿಯಲ್ಲಿದ್ದಾನೆ.

ನಿನ್ನೆ ರಾತ್ರಿ ಬೈಕ್‌ನಲ್ಲಿ ಹೊರಗೆ ಹೋಗಿದ್ದ ಹರ್ಷ 11.15ರಲ್ಲಿ ಮನೆಗೆ ವಾಪಸಾಗುತ್ತಿದ್ದನು. ಈತನಿಗೆ ಸಿಗರೇಟುವ ಚಟವಿದ್ದುದ್ದರಿಂದ ವಿಜಯನಗರದ 5ನೇ ಮುಖ್ಯರಸ್ತೆ, 2ನೇ ಕ್ರಾಸ್‌ನ ಮಾನಸ ಆಸ್ಪತ್ರೆ ಸಮೀಪ ಬಂದು ಬೈಕ್ ನಿಲ್ಲಿಸಿ ಸಿಗರೇಟ್‌ಗಾಗಿ ಅಂಗಡಿ ಹುಡುಕಾಡಿದ್ದಾನೆ. ಎಲ್ಲಾ ಅಂಗಡಿಗಳು ಮುಚ್ಚಿದ್ದ ಕಾರಣ ಇನ್ನೇನು ಬೈಕ್ ಸ್ಟಾಟ್ ಮಾಡಬೇಕು ಎನ್ನುವಷ್ಟರಲ್ಲಿ ಈತನನ್ನು ನಾಲ್ಕೈದು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ 9 ಮಂದಿ ದುಷ್ಕರ್ಮಿಗಳು ಏಕಾಏಕಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಚಾಕುವಿನಿಂದ ಇರಿದು ಈತನ ಕೊರಳಲಿದ್ದ ಚಿನ್ನದ ಸರ ತೆಗೆದುಕೊಂಡು ಪರಾರಿಯಾಗಿದ್ದಾರೆ.

ತೀವ್ರ ರಕ್ತಸ್ರಾವದಿಂದ ಹರ್ಷ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಮಾರ್ಗದಲ್ಲಿ ಹೋಗುತ್ತಿದ್ದವರು ನೋಡಿ ಈತನನ್ನು ಗುರುತಿಸಿ ತಕ್ಷಣ ಮನೆಯವರಿಗೆ ತಿಳಿಸಿದ್ದಾರೆ. ಹರ್ಷ ಸಹೋದರ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ವಿಜಯನಗರ ಠಾಣೆ ಎಸಿಪಿ ಎಸ್.ಕೆ.ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈತನನ್ನು ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿರುವ ಹಿರಿಯ ಪೊಲೀಸರು ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment