ಕರ್ನಾಟಕ

ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮೇಲೆ ಹಿರಿಯ ಕಾಂಗ್ರೆಸಿಗರ ಒತ್ತಡ

Pinterest LinkedIn Tumblr

sidduuಬೆಂಗಳೂರು, ಏ.28- ಬೇಸಿಗೆ ಬಿಸಿಲಿನ ತಾಪಮಾನ ಏರುತ್ತಿರುವಂತೆಯೇ ರಾಜಕೀಯ ಬಿಸಿ ಕೂಡ ಹೆಚ್ಚಾಗುತ್ತಿದ್ದು, ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಳ್ಳುತ್ತಿವೆ. ಜತೆಯಲ್ಲೇ ಅದರ ಸಾಧಕ-ಬಾಧಕಗಳ ಬಗ್ಗೆ ಗಂಭೀರ ಚಿಂತನ-ಮಂಥನ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಂತರಿಕವಾಗಿ ಮಡುಗಟ್ಟಿರುವ ಜ್ವಾಲಮುಖಿ ಸ್ಫೋಟಿಸುವ ಮುನ್ನವೇ ನಾಯಕತ್ವ ಬದಲಾವಣೆ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅಸ್ತಿತ್ವ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಹಿರಿಯ ಕಾಂಗ್ರೆಸಿಗರು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ.

ರಾಜ್ಯದಲ್ಲೀಗ ದಲಿತ ಮುಖ್ಯಮಂತ್ರಿಯ ಚರ್ಚೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ಆದರೆ, ಎಚ್.ಆಂಜನೇಯ, ಕೆ.ಎಚ್.ಮುನಿಯಪ್ಪ ಸೇರಿದಂತೆ ದಲಿತ ಸಮುದಾಯದ ಎಡಗೈ ನಾಯಕರು ಹಾಗೂ ಹಿಂದುಳಿದ ವರ್ಗದ ಅನೇಕ ಮುಖಂಡರು ಸಿಡಿದೇಳುವ ಆತಂಕ ಇದೆ. ಇದು ಕಾಂಗ್ರೆಸ್‌ನ ವೋಟ್ ಬ್ಯಾಂಕ್‌ಗೆ ಭಾರಿ ಪೆಟ್ಟು ನೀಡಲಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ಖರ್ಗೆ ಅವರಿಗೆ ಅನುಕೂಲಕರವಾಗಿಲ್ಲ. 2018ರ ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅವಕಾಶಗಳು ದಟ್ಟವಾಗಿವೆ.

ಪ್ರಸ್ತುತ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದಲ್ಲಿ ಚಾಲ್ತಿಯಲ್ಲಿರುವ, ಈಗಾಗಲೇ ಹೆಸರು ಚರ್ಚೆಯಲ್ಲಿರುವ ಪ್ರಭಾವಿ ಹಾಗೂ ಅನುಭವಿ ನಾಯಕರನ್ನು ಮುಖ್ಯಮಂತ್ರಿಯ ಗಾದಿಗೆ ಕೂರಿಸಿ ದಲಿತ ಸಮುದಾಯದ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ಲಿಂಗಾಯಿತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸಿದಂತಾಗುತ್ತದೆ, ಪ್ರಬಲ ಸಮುದಾಯಕ್ಕೂ ಅವಕಾಶ ಕೊಟ್ಟು ಶೋಷಿತ ಸಮುದಾಯಕ್ಕೂ ನ್ಯಾಯ ಒದಗಿಸಿದಂತಾಗುತ್ತದೆ ಎಂಬ ಲೆಕ್ಕಾಚಾರಗಳು ನಡೆದಿವೆ. ಈ ಸಮೀಕರಣ ಮುಂದಿನ 2018ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್‌ನ್ನು ಮರಳಿ ಅಧಿಕಾರಕ್ಕೆ ತರಲು ನೆರವಾಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಮತ್ತೊಂದೆಡೆ ದಲಿತ ವರ್ಗದ ನಾಯಕರಿಗೆ ಸಿಎಂ ಪಟ್ಟ ನೀಡಿ ಒಕ್ಕಲಿಗ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿ ಲಿಂಗಾಯಿತರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದರಿಂದ ಕಾಂಗ್ರೆಸ್ ತನ್ನ ಶೋಷಿತ ವರ್ಗಗಳ ಬಗೆಗಿನ ಬದ್ಧತೆಯನ್ನು ಪ್ರದರ್ಶಿಸಿದಂತಾಗುತ್ತದೆ. ಒಟ್ಟಿನಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲದಕ್ಕೂ ಮೊದಲೇ ಕಾಂಗ್ರೆಸ್‌ನಲ್ಲಿ ನಾನಾ ರೀತಿಯ ಲೆಕ್ಕಾಚಾರಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದರಿಂದ ಆಗುವ ಬದಲಾವಣೆ ಕುರಿತೂ ಚರ್ಚೆಗಳು ನಡೆದಿವೆ. ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯೇ ಕಾಂಗ್ರೆಸ್ ಉಳಿದಿರುವ ಮಾರ್ಗ ಎಂದು ಹೈಕಮಾಂಡ್ ಮುಂದೆ ಹಿರಿಯ ನಾಯಕರು ಪ್ರತಿಪಾದಿಸುತ್ತಿದ್ದಾರೆ.

Write A Comment