ಕರ್ನಾಟಕ

ಇಂದು ಹಸಿರು ನಿಶಾನೆ; ಮೆಟ್ರೊ ಸುರಂಗ ಸಂಚಾರಕ್ಕೆ ಕಾತರ

Pinterest LinkedIn Tumblr

pvec29apr16aBMRCL-03ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹಸಿರು ನಿಶಾನೆ ತೋರುವರು.

ಈ ಮೂಲಕ ‘ನಮ್ಮ ಮೆಟ್ರೊ’ದ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಒಟ್ಟು 18 ಕಿ.ಮೀ. ಉದ್ದದ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಸಾಧ್ಯವಾಗಲಿದೆ.

ಇದು ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ. ಐದು ವರ್ಷಗಳ ಹಿಂದೆ ಸುರಂಗ ಮಾರ್ಗದ ಕಾಮಗಾರಿ ಆರಂಭವಾಗಿತ್ತು. 2015ರ ಅಂತ್ಯದೊಳಗೆ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ನಿಗಮದ ಅಧಿಕಾರಿಗಳು ಪ್ರಕಟಿಸಿದ್ದರು. ಬಳಿಕ 2–3 ಸಲ ಗಡುವು ವಿಸ್ತರಣೆಯಾಗಿತ್ತು. ಗುರುವಾರವೂ ಅಂತಿಮ ಕ್ಷಣದ ಸಿದ್ಧತೆ ನಡೆದವು.

ಉದ್ಘಾಟನಾ ಸಮಾರಂಭದಲ್ಲಿ 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶನಿವಾರ ಹಾಗೂ ಭಾನುವಾರ ಸುರಂಗ ಮಾರ್ಗದಲ್ಲಿ 30 ಸಾವಿರದಿಂದ 1 ಲಕ್ಷದವರೆಗೆ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಅಂದಾಜಿಸಿದ್ದಾರೆ. ಸುರಂಗ ಮಾರ್ಗದಲ್ಲಿ ಶನಿವಾರ ಬೆಳಿಗ್ಗೆ ವಾಣಿಜ್ಯ ಸಂಚಾರ ಆರಂಭವಾಗಲಿದೆ. ವಾರಾಂತ್ಯದಲ್ಲಿ ಸುರಂಗ ಮಾರ್ಗದಲ್ಲಿ ಸಂಚಾರದ ಸವಿಯನ್ನು ಅನುಭವಿಸಲು ಅಧಿಕ ಸಂಖ್ಯೆ ಜನರು ಬರುವ ನಿರೀಕ್ಷೆ ಇದೆ ಎಂದು ಅವರು ಹೇಳುತ್ತಾರೆ.

‘ಆರಂಭದ ದಿನಗಳಲ್ಲಿ ಜನರು ಕುತೂಹಲದಿಂದ ಮೆಟ್ರೊದಲ್ಲಿ ಸಂಚಾರ ಮಾಡುತ್ತಾರೆ. ಒಂದೆರಡು ವಾರಗಳು ಕಳೆದ ಬಳಿಕ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಕಡಿಮೆಯಾಗುತ್ತದೆ. ಬೈಯಪ್ಪನಹಳ್ಳಿ– ಎಂ.ಜಿ.ರಸ್ತೆ ಮಾರ್ಗದಲ್ಲಿ ಸಂಚಾರ ಆರಂಭವಾದಾಗ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. ಸ್ವಲ್ಪ ಸಮಯದ ಬಳಿಕ ಪ್ರಯಾಣಿಕರ ಸಂಖ್ಯೆ ಇಳಿಯಿತು’ ಎಂದು ನಿಗಮದ ಅಧಿಕಾರಿಯೊಬ್ಬರು ವಿಶ್ಲೇಷಿಸುತ್ತಾರೆ.

ಆರಂಭಗೊಳ್ಳದ ಟಿಕೆಟ್‌ ಕೌಂಟರ್: ಮಾಗಡಿ ರಸ್ತೆ ಪ್ರವೇಶದ್ವಾರಕ್ಕೆ ಹೊಂದಿಕೊಂಡಿರುವ ‘ನಮ್ಮ ಮೆಟ್ರೊ’ದ ನಗರ ರೈಲು ನಿಲ್ದಾಣದ ಬಳಿಯಲ್ಲಿ ರೈಲ್ವೆ ಇಲಾಖೆ ಈವರೆಗೂ ಟಿಕೆಟ್‌ ಕೌಂಟರ್‌ ಆರಂಭಿಸಿಲ್ಲ.

ಒಂದು ವೇಳೆ ಟಿಕೆಟ್ ಅಥವಾ ಫ್ಲಾಟ್‌ಫಾರಂ ಟಿಕೆಟ್‌ ಇಲ್ಲದೆ ಮೆಟ್ರೊ ಪ್ರಯಾಣಿಕರು ನಗರ ರೈಲು ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದರೆ ಸಮಸ್ಯೆಗೆ ಸಿಲುಕುತ್ತಾರೆ. ರೈಲ್ವೆ ಇಲಾಖೆಯ ನಿಯಮದ ಪ್ರಕಾರ ಟಿಕೆಟ್‌ ಅಥವಾ ಫ್ಲಾಟ್‌ಫಾರಂ ಟಿಕೆಟ್‌ ಇಲ್ಲದೆ ರೈಲು ನಿಲ್ದಾಣ ಪ್ರವೇಶಿಸುವಂತಿಲ್ಲ.

ಮೊಬೈಲ್‌ ಆ್ಯಪ್‌ ಅಥವಾ ರೈಲ್ವೆ ಇಲಾಖೆಯ ಮುಂಗಡ ಟಿಕೆಟ್‌ ಕಾಯ್ದಿರಿಸುವ ಕೇಂದ್ರಗಳಲ್ಲಿ ಟಿಕೆಟ್‌ ಕಾಯ್ದಿರಿಸಿದವರಿಗೆ ಯಾವುದೇ ಸಮಸ್ಯೆ ಇಲ್ಲ. ಪ್ಯಾಸೆಂಜರ್‌ ರೈಲಿನ ಪ್ರಯಾಣಿಕರು ಹಾಗೂ ಗೆಳೆಯರು, ಸಂಬಂಧಿಕರನ್ನು ಬೀಳ್ಕೊಡಲು ಬರುವವರು ರೈಲು ನಿಲ್ದಾಣಕ್ಕೆ ಪ್ರವೇಶಿಸಿದರೆ ದಂಡ ತೆರಬೇಕಾಗುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಎಚ್ಚರಿಸುತ್ತಾರೆ.

‘ನಗರ ರೈಲು ನಿಲ್ದಾಣಕ್ಕೆ ತೆರಳುವವರಿಗೆ ಅನುಕೂಲವಾಗಲೆಂದೇ ಬೆಂಗಳೂರು ಮೆಟ್ರೊ ರೈಲು ನಿಗಮವು ಇಲ್ಲಿ ನಿಲ್ದಾಣ ಆರಂಭಿಸಿದೆ. ಆದರೆ, ಪೂರಕ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ನಿಗಮ ಹಾಗೂ ರೈಲ್ವೆ ಇಲಾಖೆ ನಡುವಿನ ಸಮನ್ವಯದ ಕೊರತೆಯಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಪ್ರಯಾಣಿಕರೊಬ್ಬರು ದೂರುತ್ತಾರೆ.

ಎರಡು ವಾರಗಳಲ್ಲಿ ‘ಮೆಟ್ರೊ ಬೈಕ್‌’ಗಳು ಲಭ್ಯ
ಇನ್ನೆರಡು ವಾರಗಳಲ್ಲಿ ನಗರದ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ‘ಬಾಡಿಗೆ ಬೈಕ್‌’ ಲಭ್ಯವಾಗಲಿದೆ.

ಮೆಟ್ರೊದಲ್ಲಿ ಸಂಚಾರ ಮಾಡಿದ ಪ್ರಯಾಣಿಕರು ಅದನ್ನು ಮನೆಗೆ ಅಥವಾ ಕಚೇರಿಗೆ ಕೊಂಡೊಯ್ಯಬಹುದು. ಬೈಯಪ್ಪನಹಳ್ಳಿ, ಟ್ರಿನಿಟಿ, ಇಂದಿರಾನಗರ, ಮಂತ್ರಿ ನಿಲ್ದಾಣ, ಪೀಣ್ಯ ನಿಲ್ದಾಣಗಳಲ್ಲಿ 30 ದ್ವಿಚಕ್ರವಾಹನಗಳು ಬಾಡಿಗೆಗೆ ಸಿಗಲಿವೆ.

ಪ್ರಯಾಣಿಕರು ಗುರುತಿನ ಚೀಟಿ ನೀಡಿ ಬೈಕ್‌ ಬಾಡಿಗೆಗೆ ಪಡೆಯಬಹುದು. ಮೂರು ಕಿ.ಮೀ. ದೂರದ ಪ್ರಯಾಣಕ್ಕೆ ₹20 ಬಾಡಿಗೆ ನಿಗದಿಪಡಿಸಲಾಗಿದೆ. ಬಾಡಿಗೆಯ ಅವಧಿ ಅರ್ಧ ಗಂಟೆ. ಬಳಿಕದ ಪ್ರತಿ ಕಿ.ಮೀ.ಗೆ ಹೆಚ್ಚುವರಿಯಾಗಿ ₹3 ಪಾವತಿಸಬೇಕು ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಇನ್ನೊಂದೆಡೆ, ಮೆಟ್ರೊ ನಿಲ್ದಾಣಗಳಿಗೆ ಫೀಡರ್‌ ಬಸ್‌ಗಳ ಸೇವೆ ಒದಗಿಸಬೇಕು ಎಂದು ಬಿಎಂಟಿಸಿಗೆ ನಿಗಮ ಮನವಿ ಮಾಡಿದೆ.

Write A Comment