ಕರ್ನಾಟಕ

ಸಂತ್ರಸ್ತರ ಗೋಳಿಗೆ ಸಿಎಂ ಕುರುಡು

Pinterest LinkedIn Tumblr

bsyಕಲಬುರಗಿ, ಏ. ೨೮ – ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯ ತೀವ್ರ ತರದ ಬರ ಎದುರಿಸುತ್ತಿದ್ದು, ಇದು 1972ರ ಬರದ ನೋವು ಮತ್ತು ಸಂಕಟದ ಅನುಭವ ನೀಡುತ್ತಿದ್ದರೂ, ಮುಖ್ಯಮಂತ್ರಿಗಳು ಬರ ಪರಿಹಾರಕ್ಕೆ ಯಾವುದೇ ಹೊಸ ಪ್ಯಾಕೇಜಿನ ಅಗತ್ಯವಿಲ್ಲ ಎನ್ನುವ ಅವರಿಗೆ ರಾಜ್ಯದ ಬರ ಪರಿಸ್ಥಿತಿಯ ಅರಿವು ಅವರಿಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಆರೋಪಿಸಿದರು.
ಬರದಿಂದ ತತ್ತರಿಸಿರುವ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಗ್ರಾಮಕ್ಕಿಂದು ಭೇಟಿ ನೀಡಿ ಅಲ್ಲಿನ ಬರ ಪರಿಸ್ಥಿತಿಯನ್ನು ರೈತರೊಂದಿಗೆ ಸಂವಾದದ ಮೂಲಕ ಅವಲೋಕಿಸಿದ ಯಡಿಯೂರಪ್ಪ ಅವರು, ಬರ ಪರಿಸ್ಥಿತಿಯ ನಿರ್ವಾಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ರಾಜ್ಯದಲ್ಲಿನ ತೀವ್ರ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಿಗೆ ಟ್ಯಾಂಕರ ಮೂಲಕ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ, ಗೋ-ಶಾಲೆಗಳು ಸಮರ್ಕವಾಗಿಲ್ಲ. ಬರದ ಬಗ್ಗೆ ನಿರ್ಲಕ್ಷತ ಮಾಡುವ ಮುಖ್ಯಮಂತ್ರಿಗಳು, ಸಂಕಷ್ಟದಲ್ಲಿರುವ ರಾಜ್ಯದ ಜನತೆಯ ನೆರವಿಗೆ ಮುಂದಾಗುವುದನ್ನು ಬಿಟ್ಟು ಬರದಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರ ಶೇ.50ರ ಸಬ್ಸಿಡಿ ದರದಲ್ಲಿ ಬಿತ್ತನೆ ಬಿಜಗಳನ್ನು ಪೂರೈಸುತ್ತದೆ, ರಸಗೊಬ್ಬರವನ್ನು ಪಾರದರ್ಶಕವಾಗಿ ವಿತರಿಸುತ್ತಿದ್ದಲ್ಲದೇ ಶೇ.3ರ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿದೆ ಎಂದ ಯಡಿಯೂರಪ್ಪ ಅವರು, ಇಲ್ಲಿನ ರೈತ ಮುಖಂಡರಾದ ದಯಾನಂದ ಪಾಟೀಲ್ ಅವರು, ಕೇಂದ್ರ ಸರ್ಕಾರ ರೈತರಿಗೆ ಸಂಪೂರ್ಣ ಉಚಿತ ರಸಗೊಬ್ಬರ ಮತ್ತು ಬಿತ್ತನೆ ಬಿಜಗಳನ್ನು ಪೂರೈಸುವಂತೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ನಾನು ಮಾತನಾಡುವುದಕ್ಕಿಂತ ಇಲ್ಲಿನ ಬರದ ಪರಿಸ್ಥಿತಿಗಳ ಬಗ್ಗೆ ಇಲ್ಲಿನ ರೈತರು ಮತ್ತು ಗ್ರಾಮಸ್ಥರು ಹೆಳಲಿ ಅವರ ನೋವನ್ನು ಆಲಿಸಿ ರಾಜ್ಯ ಸರ್ಕಾರದ ಕಣ್ಣು ತೆರೆಸಲು ಪ್ರಯತ್ನಿಸುವುದಾಗಿ ಯಡಿಯೂರಪ್ಪ ಹೇಳಿದರು. ಅವರೊಂದಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Write A Comment